ADVERTISEMENT

ಕಟಪಾಡಿ: ಮಳೆಯೊಂದೇ ನೀರಿನ ಸಮಸ್ಯೆಗೆ ಪರಿಹಾರ

ಕಟಪಾಡಿ, ಕೋಟೆ ಗ್ರಾ. ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗೆ ಸಿಕ್ಕಿಲ್ಲ ಶಾಶ್ವತ ಪರಿಹಾರ

ಪ್ರಕಾಶ ಸುವರ್ಣ ಕಟಪಾಡಿ
Published 17 ಏಪ್ರಿಲ್ 2025, 6:30 IST
Last Updated 17 ಏಪ್ರಿಲ್ 2025, 6:30 IST
ಕೋಟೆ ಗ್ರಾಮ ಪಂಚಾಯಿತಿ ಪಕ್ಕದಲ್ಲೇ ನಿರ್ಮಾಣಗೊಂಡಿರುವ ೩ ಬೃಹತ್ ನೀರಿನ ಟ್ಯಾಂಕ್ ಗಳಲ್ಲಿ ೧ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.
ಕೋಟೆ ಗ್ರಾಮ ಪಂಚಾಯಿತಿ ಪಕ್ಕದಲ್ಲೇ ನಿರ್ಮಾಣಗೊಂಡಿರುವ ೩ ಬೃಹತ್ ನೀರಿನ ಟ್ಯಾಂಕ್ ಗಳಲ್ಲಿ ೧ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.   

ಶಿರ್ವ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಟಪಾಡಿ ಗ್ರಾಮ ಪಂಚಾಯಿತಿ, ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಮಳೆ ಬಂದರೆ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ. ಹತ್ತಿರದಲ್ಲೇ ಇರುವ ಎರಡೂ ಗ್ರಾಮಗಳಲ್ಲಿದ್ದರೂ ಕೋಟೆ ಗ್ರಾಮದಲ್ಲಿ ಉಪ್ಪುನೀರಿನ ಪ್ರದೇಶ ಹೆಚ್ಚಿದ್ದು, ಮಟ್ಟು ಗ್ರಾಮದ ಜನರು ಪಂಚಾಯಿತಿ ನೀರನ್ನೇ ಆಶ್ರಯಿಸುವಂತಾಗಿದೆ.

ಕಟಪಾಡಿಯಲ್ಲಿ ಸಾಕಷ್ಟು ನೀರಿನ ಸಂಪನ್ಮೂಲಗಳಿದ್ದರೂ ಈ ಭಾಗದ ಜನರ ನೀರೀಕ್ಷೆಯಂತೆ ನೀರಿನ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಕೊಡುವ ನಿಟ್ಟಿನಲ್ಲಿ ಪೈಪ್‌ಲೈನ್‌ ಅಳವಡಿಸಲಾಗಿದೆ. ವರ್ಷಗಳೇ ಕಳೆದರೂ  ಯೋಜನೆಯ ಅನುಷ್ಠಾನ ಸಮರ್ಪಕವಾಗಿಲ್ಲ ಎಂಬುದು ಸಾರ್ವಜನಿಕರ ದೂರು.

ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಣಗುಡ್ಡೆ ಮತ್ತು ಮೂಡಬೆಟ್ಟು ಗ್ರಾಮದಲ್ಲಿ ಒಟ್ಟು 16 ಸಾವಿರ ಜನಸಂಖ್ಯೆಯಿದೆ. ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಟೆ, ಮಟ್ಟು ಗ್ರಾಮದಲ್ಲಿ 5914 ಜನಸಂಖ್ಯೆಯಿದೆ. ಆದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಿಲ್ಲ. ಮಳೆ ಬಂದರೆ ಮಾತ್ರ ತಾತ್ಕಾಲಿಕ ಪರಿಹಾರ ಸಾಧ್ಯ.

ADVERTISEMENT

ಏಣಗುಡ್ಡೆ ಗ್ರಾಮದ ಜೆ.ಎನ್. ನಗರ ಕಾಲನಿ ನಿವಾಸಿಗಳು ಬೇಸಿಗೆಯಲ್ಲಿ ನೀರಿಗಾಗಿ ಬವಣೆ ಪಡುತ್ತಾರೆ. 125 ಮನೆಗಳಿಗೆ ಒಂದು ನೀರಿನ ಟ್ಯಾಂಕ್ ಮೂಲಕ ಪೈಪ್‌ಲೈನ್ ವ್ಯವಸ್ಥೆ ಹಿಂದಿನಿಂದಲೂ ಇದೆ. ಹೊಸತಾಗಿ ಜಲಜೀವನ ಮಿಷನ್ ಯೋಜನೆಯಡಿ ಕೂಡ ಪೈಪ್‌ಲೈನ್ ಅಳವಡಿಸಲಾಗಿದೆ. ಇಲ್ಲಿ 4 ಸರ್ಕಾರಿ ಬಾವಿಗಳು, 6 ಬೋರ್‌ವೆಲ್‌ಗಳಿದ್ದರೂ ನೀರಿನ ಸಂಪನ್ಮೂಲದ ಕೊರತೆ ಆಗಾಗ ಎದುರಾಗುತ್ತಿದೆ.

ಮೂಡಬೆಟ್ಟು ಗ್ರಾಮದ ಸರ್ಕಾರಿಗುಡ್ಡೆ ಕಾಲನಿಯಲ್ಲಿ ಕೂಡ ಒಂದು ಬಾವಿ, ಬೋರ್‌ವೆಲ್ ಅಳವಡಿಸಲಾಗಿದ್ದು, ಅಷ್ಟೊಂದು ನೀರಿನ ಸಮಸ್ಯೆ ಇಲ್ಲ. ಶಂಕರಪುರ ಶಿವಾನಂದ ನಗರದಲ್ಲಿ ಸ್ವಜಲಧಾರ ಯೋಜನೆಯ ನಳ್ಳಿ ನೀರು ಸಹಿತ ಬೋರ್‌ವೆಲ್ ಅಳವಡಿಸಲಾಗಿದೆ.

ಮೂಡಬೆಟ್ಟು ಬೀಡಿನ ಕರೆಯಲ್ಲಿ ಸ್ವಜಲಧಾರಾರ ನೀರು ಪೂರೈಕೆ ಇದೆ. ಏಣಗುಡ್ಡೆ ಗ್ರಾಮದ ಅಗ್ರಹಾರ ದುರ್ಗಾನಗರದಲ್ಲಿ 4 ಬೋರ್‌ವೆಲ್, 50 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ಇದೆ. ಚೊಕ್ಕಾಡಿಯಲ್ಲಿ ಬೋರ್‌ವೆಲ್ ವ್ಯವಸ್ಥೆಯಿದೆ.

ಕಟಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಕೊರತೆಯಿಲ್ಲ. ಬೇಸಿಗೆಯಲ್ಲಿ ಕೊಂಚ ನೀರಿನ ಪೂರೈಕೆ ಕಷ್ಟ ಆದರೂ ನಿರ್ವಹಣೆ ಮಾಡಲಾಗುತ್ತಿದೆ. ಸಕಾಲದಲ್ಲಿ ಮಳೆ ಬಂದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ಬಾಧಿಸದು ಎನ್ನುತ್ತಾರೆ ಕಟಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ ಕಟಪಾಡಿ.

ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಟೆ, ಮಟ್ಟು ಗ್ರಾಮಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು ಜಲ ಸಂಪನ್ಮೂಲದ ಕೊರತೆಯಿದ್ದು, ಇನ್ನು ಬೇಸಿಗೆಯಲ್ಲಿ ಮಳೆ ಬಾರದಿದ್ದಲ್ಲಿ ಪ್ರತಿವರ್ಷದಂತೆ ಟ್ಯಾಂಕರ್ ನೀರು ಪೂರೈಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಕುರ್ಕಾಲು ಬಹುಗ್ರಾಮ ಯೋಜನೆಯಡಿ ಕುರ್ಕಾಲು ಅಣೆಕಟ್ಟೆಯಲ್ಲಿ ಶೇಖರಿಸಲಾಗುತ್ತಿರುವ ನೀರನ್ನು ಕೋಟೆ ಗ್ರಾಮಕ್ಕೆ ಪೂರೈಕೆ ಮಾಡಿದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬಹುದು ಎನ್ನುತ್ತಾರೆ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ ಜತ್ತನ್ನ.

ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಕಾಲದಲ್ಲಿ ಮಳೆ ಬಾರದಿದ್ದರೆ ಟ್ಯಾಂಕರ್ ನೀರೇ ಗತಿ. ಮಟ್ಟು ಕಡಲತೀರ ಮತ್ತು ನದಿ ತೀರವಾಸಿಗಳು ಸರ್ವಋತುವಿನಲ್ಲಿ ಪಂಚಾಯಿತಿ ನಳ್ಳಿ ನೀರನ್ನೇ ಆಶ್ರಯಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಉಪ್ಪುನೀರಿನ ಸಮಸ್ಯೆ ಇರುವುದರಿಂದ ಗ್ರಾಮಸ್ಥರು ವೈಯಕ್ತಿಕವಾಗಿ ಮನೆ ಬಳಕೆಗೆ ಬಾವಿ ಅಥವಾ ಬೋರ್‌ವೆಲ್ ನಿರ್ಮಿಸುವಂತಿಲ್ಲ.

ಕೋಟೆ ಗ್ರಾಮದ ವಿನೋಭ ನಗರದಲ್ಲಿ ಕಟಪಾಡಿ ರೋಟರಿಯಿಂದ ಬಾವಿ ಮತ್ತು ಟ್ಯಾಂಕ್ ನಿರ್ಮಿಸಲಾಗಿದೆ. ಸಾರ್ವಜನಿಕ ಬಾವಿ ಕೂಡ ಇದೆ. ಇಂದಿರಾನಗರದಲ್ಲಿ ಸಾರ್ವಜನಿಕ ಬಾವಿ ಮತ್ತು ಬೋರ್‌ವೆಲ್ ಇದೆ. ಸಮಾಜ ಮಂದಿರ ಕಾಲನಿ ನಿವಾಸಿಗಳಿಗೆ ನಳ್ಳಿ ನೀರೇ ಗತಿ. ಅಂಬಾಡಿ ಭಾಗದಲ್ಲಿ ಅಷ್ಟೊಂದು ನೀರಿನ ಸಮಸ್ಯೆಯಿಲ್ಲ.

ಮಟ್ಟು ಗ್ರಾಮದ ದಡ್ಡಿ, ದೇವರ ಕುದ್ರು, ಪರೆಂಕುದ್ರು, ಆಳಿಂಜೆ ಕುದ್ರು, ಮಟ್ಟು ಕೊಪ್ಲ, ಕೋಟೆ ಕಂಡಿಗ, ಕೈಪುಂಜಾಲ್ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ  ಸಾರ್ವಕಾಲಿಕ ಎನಿಸಿದೆ. ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಂಪನ್ಮೂಲದ ಕೊರತೆಯಿದೆ. ಕೋಟೆ ಗ್ರಾಮ ಪಂಚಾಯಿತಿ ಪಕ್ಕದಲ್ಲೇ ನಿರ್ಮಾಣಗೊಂಡಿರುವ 3 ಬೃಹತ್ ನೀರಿನ ಟ್ಯಾಂಕ್ ಗಳಲ್ಲಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಉಳಿದೆರಡು ಟ್ಯಾಂಕ್ ಹಳೆಯದಾಗಿದ್ದು, ಕೆಟ್ಟು ನಿಂತಿದೆ. 50 ಸಾವಿರ ಲೀಟರ್‌ ಸಾಮರ್ಥ್ಯದ ಒಂದೇ ಟ್ಯಾಂಕ್‌ನಲ್ಲಿ ಶೇಖರಿಸಿಟ್ಟು ವರ್ಷವಿಡೀ ಕೋಟೆ, ಮಟ್ಟು ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ.

ಜಲಜೀವನ್ ಮಿಷನ್ ಯೋಜನೆಯಡಿ ನೀರು ಪೂರೈಕೆ

ಜಲ ಜೀವನ್ ಮಿಷನ್ ಯೋಜನೆಯಡಿ 2024 ರ ವೇಳೆಗೆ ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ ನಳ್ಳಿ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಾಕಷ್ಟು ಕುಡಿಯುವ ನೀರನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಬೂದು ನೀರಿನ ನಿರ್ವಹಣೆ ನೀರಿನ ಸಂರಕ್ಷಣೆ ಮಳೆ ನೀರು ಕೊಯ್ಲು ಮೂಲಕ ಮರುಪೂರಣ ಮತ್ತು ಮರುಬಳಕೆಯಂತಹ ಕಡ್ಡಾಯ ಅಂಶಗಳಾಗಿ ಮೂಲ ಸುಸ್ಥಿರತೆಯ ಕ್ರಮಗಳನ್ನು ಸಹ ಕಾರ್ಯಗತಗೊಳಿಸುತ್ತದೆ. ಈ ಯೋಜನೆಯಡಿ ಕಟಪಾಡಿ ಮತ್ತು ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರ‍್ನಾಲ್ಕು ವರ್ಷದ ಹಿಂದೆಯೇ ಪೈಪ್‌ಲೈನ್ ಅಳವಡಿಕೆ ಆರಂಭಗೊಂಡು ಇತ್ತೀಚೆಗಷ್ಟೇ ಮುಕ್ತಾಯಗೊಳ್ಳುತ್ತಿದೆ. ಈ ಪ್ರದೇಶದಲ್ಲಿನ ನೀರಿನ ಸಂಪನ್ಮೂಲಗಳನ್ನು ಬಳಸಿಕೊಂಡು ನೀರು ಪೂರೈಕೆ ಸಮರ್ಪಕವಾದಲ್ಲಿ ಯೋಜನೆ ಈ ಭಾಗದಲ್ಲಿ ಯಶಸ್ವಿಯಾಗಲಿದೆ ಎಂಬುದು ಗ್ರಾಮಸ್ಥರ ನಿರೀಕ್ಷೆಯಾಗಿದೆ.

ಕೋಟೆ ಗ್ರಾಮ ಪಂಚಾಯಿತಿ ಪಕ್ಕದಲ್ಲೇ ನಿರ್ಮಾಣಗೊಂಡಿರುವ ೩ ಬೃಹತ್ ನೀರಿನ ಟ್ಯಾಂಕ್ ಗಳಲ್ಲಿ ೧ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.