ADVERTISEMENT

ಹಲ್ತೂರು: ಗದ್ದೆಯ ನೀರು ಕಡಿಯಲು ತೆರಳಿದ್ದ ಮಹಿಳೆ ಗುಂಡಿಗೆ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 4:33 IST
Last Updated 5 ಜುಲೈ 2022, 4:33 IST
ಲಕ್ಷ್ಮೀ ಪೂಜಾರ್ತಿ
ಲಕ್ಷ್ಮೀ ಪೂಜಾರ್ತಿ   

ಕುಂದಾಪುರ: ಧಾರಾಕಾರ ಮಳೆಯಿಂದಾಗಿ ಕೃಷಿ ಗದ್ದೆಗಳಲ್ಲಿ ತುಂಬಿದ್ದ ನೀರನ್ನು ಕಡಿಯಲೆಂದು ಗದ್ದೆಗೆ ತೆರಳಿದ್ದ ಕೃಷಿಕ ಮಹಿಳೆ ಯೊಬ್ಬರು ಆಕಸ್ಮಿಕವಾಗಿ ನೀರು ತುಂಬಿದ್ದ ಹೊಂಡದ ಗದ್ದೆಗೆ ಬಿದ್ದು ಸೋಮವಾರ ಮೃತಪಟ್ಟಿದ್ದಾರೆ.

ಹಲ್ತೂರು ಗ್ರಾಮದ ಕೆಳಬೆಟ್ಟು ನಿವಾಸಿ ಶೀನ ಪೂಜಾರಿ ಎಂಬುವರ ಪತ್ನಿ ಲಕ್ಷ್ಮೀ ಪೂಜಾರ್ತಿ (66) ಮೃತರು.

ಸೋಮವಾರ ಬೆಳಿಗ್ಗೆಯಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆಯು ಮಧ್ಯಾಹ್ನ ಸ್ವಲ್ಪ ಬಿಡುವು ನೀಡಿದಾಗ ಗದ್ದೆಯಲ್ಲಿ ತುಂಬಿದ ನೀರನ್ನು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಲು, ಗದ್ದೆಯ ಅಂಚನ್ನು ಕಡಿದು ಕೊಡಲೆಂದು ಹಾರೆಯನ್ನು ತೆಗೆದುಕೊಂಡು ದಂಪತಿ ಹಲ್ತೂರು ಬೈಲಿನ ಗದ್ದೆಗಳಿಗೆ ತೆರಳಿದ್ದರು.

ADVERTISEMENT

ಶೀನ ಪೂಜಾರಿ ಅವರು ಮುಂದಿನ ಗದ್ದೆಗೆ ಹೋಗಿದ್ದರು. ಲಕ್ಷ್ಮೀ ಪೂಜಾರ್ತಿ ಅವರು ಹಿಂದಿನ ಗದ್ದೆಯಲ್ಲಿ ನೀರು ಕಡಿಯಲೆಂದು ಹಾರೆಯಿಂದ ಕೆಲಸ ಮಾಡುತ್ತಿದ್ದಾಗ ಆಯ ತಪ್ಪಿ ಬಿದ್ದಿದ್ದಾರೆ. ಹೊಂಡದ ಗದ್ದೆಯಾಗಿದ್ದರಿಂದ ಮುಖ ನೀರಿನಲ್ಲಿ ಮುಳುಗಿದೆ. ಪತ್ನಿ ಬಿದ್ದಿರುವುದನ್ನು ಕಂಡು ಶೀನ ಪೂಜಾರಿ ಅವರು ಲಕ್ಷ್ಮೀ ಅವರನ್ನು ಮೇಲೆತ್ತಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಆರೈಕೆ ಮಾಡಿದರೂ ಪ್ರಯೋಜನವಾಗಲಿಲ್ಲ.

ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಕಿರಣ್ ಗೋರಯ್ಯ, ಮಲ್ಯಾಡಿ ಶಿವರಾಮ್ ಶೆಟ್ಟಿ ಹಾಗೂ ಗ್ರಾಮಲೆಕ್ಕಿಗರಾದ ದೀಪಿಕಾ ಶೆಟ್ಟಿ ಭೇಟಿ ನೀಡಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರಿಗೆ ಐವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.