ADVERTISEMENT

ಹೊಸ ಕೈಗಾರಿಕೆಗಳು ಸ್ಥಾಪನೆಯಾಗಲಿ: ಜಿಲ್ಲಾಧಿಕಾರಿ ಸ್ವರೂಪಾ

ಟ್ರೇಡ್ಸ್ ಯೋಜನೆ ಕುರಿತ ಒಂದು ದಿನದ ಅರಿವು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:31 IST
Last Updated 18 ಸೆಪ್ಟೆಂಬರ್ 2025, 4:31 IST
<div class="paragraphs"><p>ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉದ್ಘಾಟಿಸಿದರು</p></div>

ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉದ್ಘಾಟಿಸಿದರು

   

ಉಡುಪಿ: ದೇಶದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳು ಮಹತ್ತರ ಪಾತ್ರ ವಹಿಸುತ್ತವೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಅವರುರಲ್ಲಿ ಕೌಶಲ ಮತ್ತು ಜ್ಞಾನವನ್ನು ಹೆಚ್ಚಿಸುವುದರೊಂದಿಗೆ ಉದ್ಯಮವನ್ನು ವಿಸ್ತರಿಸಲು ಅರಿವು ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.

ಮಣಿಪಾಲದ ಶಿವಳ್ಳಿ ಕೈಗಾರಿಕಾ ಪ್ರದೇಶದ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಭವನದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂ.ಎಸ್.ಎಂ.ಇ. ನಿರ್ದೇಶನಾಲಯ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (ಕೆ.ಸಿ.ಟಿ.ಯು), ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್), ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಣಿಪಾಲ ಉಡುಪಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾರಿಕೆಗಳ ಹೊಸ ಘಟಕ ಸ್ಥಾಪನೆಗೆ ಹಾಗೂ ಕೈಗಾರಿಕೆಗಳ ಉನ್ನತೀಕರಣಕ್ಕೆ ಆರ್ಥಿಕ ನೆರವು ನೀಡುತ್ತಿವೆ. ಅವುಗಳ ಪ್ರಯೋಜನವನ್ನು ಉದ್ದಿಮೆದಾರರು ಪಡೆಯುವುದರೊಂದಿಗೆ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದರು.

ಕಾರ್ಕಳ, ಹೆಬ್ರಿ ಹಾಗೂ ಕಾಪುವಿನಲ್ಲಿ ಹೊಸ ಕೈಗಾರಿಕಾ ಘಟಕ ಸ್ಥಾಪನೆಗೆ ಈಗಾಗಲೇ ಜಾಗ ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಉದ್ಯಮಗಳು ಬೆಳೆದಂತೆ ಸ್ಥಳೀಯರಿಗೆ ಉದ್ಯೋಗ ದೊರಕುವುದರಿಂದ ನಗರಗಳತ್ತ ಉದ್ಯೋಗ ಅರಸಿ ತೆರಳುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸವಾಲುಗಳನ್ನು ಎದುರಿಸಿ ಎಲ್ಲರಿಗೂ ಮಾದರಿಯಾಗುವ ನಿಟ್ಟಿನಲ್ಲಿ ಉದ್ದಿಮೆದಾರರು ಬೆಳೆಯಬೇಕು. ಎಂ.ಎಸ್.ಎಂ.ಇ. ಗಳು ಎದುರಿಸುತ್ತಿರುವ ಕ್ರೆಡಿಟ್ ಸವಾಲುಗಳನ್ನು ಪರಿಹರಿಸಲು ಟ್ರೇಡ್ ಸಿಸ್ಟಮ್ ಒಂದು ಉತ್ತಮ ವೇದಿಕೆಯಾಗಿದೆ ಎಂದರು.

ADVERTISEMENT

ಟೆಕ್ಸಾಕ್ ಸಿ.ಇ.ಒ ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ, ಪಿ.ಪಿ ಸಿಂಗ್ ಹಾಗೂ ಜಯಾಶೆಟ್ಟಿ ಉದ್ಯಮಶೀಲರಿಗೆ ಮಾಹಿತಿ ನೀಡಿದರು.

ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಹರೀಶ್ ಕುಂದರ್, ನಟರಾಜ್ ಹೆಗ್ಡೆ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಉಪಸ್ಥಿತರಿದ್ದರು.

ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್ ಸ್ವಾಗತಿಸಿದರು. ಉಡುಪಿ ಸಿಡಾಕ್ ಉಪನಿರ್ದೇಶಕ ಶಿವಾನಂದ ಎಲಿಗಾರ್ ನಿರೂಪಿಸಿದರು. ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸೀತಾರಾಮ ಶೆಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.