ADVERTISEMENT

‘ಅಂಗವಿಕಲರು ವಿಕಲಚೇತನರಲ್ಲ; ವಿಶೇಷ ಚೇತನರು’

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 15:36 IST
Last Updated 3 ಡಿಸೆಂಬರ್ 2020, 15:36 IST
ವಿಶ್ವ ಅಂಗವಿಕಲ ದಿನಾಚರಣೆಯಲ್ಲಿ ಕೋವಿಡ್‌ ವಾರಿಯರ್ಸ್‌ಗಳಿಗೆ ಮಾಸ್ಕ್ ಹೊಲಿದುಕೊಟ್ಟು ಪ್ರಶಂಸೆ ಪಡೆದಿದ್ದ ಅಂಗವಿಕಲ ವಿದ್ಯಾರ್ಥಿನಿ ಸಿಂಧೂರಿಗೆ ಸನ್ಮಾನಿಸಲಾಯಿತು.
ವಿಶ್ವ ಅಂಗವಿಕಲ ದಿನಾಚರಣೆಯಲ್ಲಿ ಕೋವಿಡ್‌ ವಾರಿಯರ್ಸ್‌ಗಳಿಗೆ ಮಾಸ್ಕ್ ಹೊಲಿದುಕೊಟ್ಟು ಪ್ರಶಂಸೆ ಪಡೆದಿದ್ದ ಅಂಗವಿಕಲ ವಿದ್ಯಾರ್ಥಿನಿ ಸಿಂಧೂರಿಗೆ ಸನ್ಮಾನಿಸಲಾಯಿತು.   

ಉಡುಪಿ: ಅಂಗವಿಕಲರು ವಿಕಲ ಚೇತನರಲ್ಲ; ವಿಶೇಷ ಚೇತನರು. ದೇವರ ಮಕ್ಕಳಂತಿರುವ ಅಂಗವಿಕಲರನ್ನು ಸಮಾನವಾಗಿ ಕಾಣಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಅಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಹಿರಿಯ ನಾಗರಿಕರು ಮತ್ತು ಅಂಗವಿಕಲರ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದರು.

ಅಂಗವಿಕಲತೆ ಎಂದರೆ ಅಂಗಾಂಗಗಳ ಊನ ಎಂಬುದು ವ್ಯಾಖ್ಯಾನ. ಆದರೆ, ಅಂಗವಿಕಲರ ಸಾಧನೆ ನೋಡಿದರೆ ಅವಕಾಶಗಳ ಕೊರತೆ ಎಂಬುದು ಎದ್ದು ಕಾಣುತ್ತದೆ. ವಿಶೇಷ ಚೇತನ ಮಕ್ಕಳನ್ನು ಪೋಷಿಸುವರಿಗೆ ದೇವರ ಆಶೀರ್ವಾದ ಇರುತ್ತದೆ ಎಂದರು.

ADVERTISEMENT

ಅಂಗವಿಕಲರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿಡಲಿದೆ. ಈಗಿರುವ ಸವಲತ್ತುಗಳು ಅರ್ಹರಿಗೆ ತಲುಪಿಸಲು ಕ್ರಮಕೈಗೊಳ್ಳಲಾಗುವುದು. ಜತೆಗೆ ವಿವಿಧ ಇಲಾಖೆಗಳಲ್ಲಿ ಮೀಸಲಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದರು.

ನನ್ನ ಕ್ಷೇತ್ರದಲ್ಲಿ ಗಂಗಮ್ಮ ಸೋಮಪ್ಪ ಟ್ರಸ್ಟ್‌ನಿಂದ ಅಂಗವಿಕಲರಿಗೆ ವಿಶೇಷ ಸವಲತ್ತು ನೀಡಲಾಗುತ್ತದೆ. ಉಡುಪಿ ಜಿಲ್ಲೆಯ ಉಸ್ತುವಾರಿಗಿರುವ ಹಿನ್ನೆಲೆಯಲ್ಲಿ ಇಲ್ಲಿಯೂ ಟ್ರಸ್ಟ್‌ ಕಾರ್ಯಕ್ರಮ ವಿಸ್ತರಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋವಿಡ್‌ ವಾರಿಯರ್ಸ್‌ಗಳಿಗೆ ಮಾಸ್ಕ್ ಹೊಲಿದುಕೊಟ್ಟ ಅಂಗವಿಕಲ ವಿದ್ಯಾರ್ಥಿನಿ ಸಿಂಧೂರಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ಶ್ರದ್ಧಾ ಶೆಟ್ಟಿಗೆ ಗೌರವಿಸಲಾಯಿತು.

ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸಂಧ್ಯಾ ಕಾಮತ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಶಾಸಕ ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಕಾನೂನು ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.