ADVERTISEMENT

ಅತಿಯಾದ ಇಯರ್‌ಫೋನ್ ಬಳಕೆ ಬೇಡ: ಶ್ರವಣ ಸಮಸ್ಯೆ ತಡೆಗೆ ವೈದ್ಯರ ಸಲಹೆ

ಶ್ರವಣ ಸಮಸ್ಯೆ ತಡೆಗೆ ವೈದ್ಯರ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 13:16 IST
Last Updated 3 ಮಾರ್ಚ್ 2021, 13:16 IST
ವಿಶ್ವಶ್ರವಣ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರವಣ ದೋಷ ಅರಿವು ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ವಿಶ್ವಶ್ರವಣ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರವಣ ದೋಷ ಅರಿವು ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.   

ಉಡುಪಿ: ಆರಂಭಿಕ ಹಂತದಲ್ಲಿಯೇ ಕಿವುಡುತನ ಸಮಸ್ಯೆ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಶ್ರವಣ ದೋಷ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂದು ಜಿಲ್ಲಾ ಆಸ್ಪತ್ರೆಯ ಕಿವಿ ಮೂಗು ಗಂಟಲು ತಜ್ಞ ಡಾ. ಮುರಳೀಧರ ಪಾಟೀಲ್ ಹೇಳಿದರು.

ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಹಯೋಗದಲ್ಲಿ, ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಶ್ರವಣ ಸಮಸ್ಯೆ ಗುರುತಿಸಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. ನಿರ್ಲಕ್ಷ ವಹಿಸಿದರೆ ಶಾಶ್ವತ ಕಿವುಡುತನ ಉಂಟಾಗಲಿದೆ. ಕಿವುಡುತನದಿಂದ ಸಂವಹನ ಸಮಸ್ಯೆ ಎದುರಾಗಿ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೈಯಕ್ತಿಕ ಪ್ರಗತಿಗೆ ಅಡ್ಡಿಯಾಗಲಿದೆ ಎಂದರು.

ADVERTISEMENT

ಮಕ್ಕಳಲ್ಲಿ ಹುಟ್ಟಿದ ಕೂಡಲೇ ಕಿವುಡುತನ ಸಮಸ್ಯೆಯ ಕುರಿತು ವೈದ್ಯರು ಪರೀಕ್ಷಿಸಬೇಕು. ಕಿವುಡುತನವಿದ್ದ ಮಕ್ಕಳಿಗೆ ಮಾತನಾಡಲು ಕಷ್ಟವಾಗಲಿದೆ. ಮಕ್ಕಳು ಶ್ರವಣ ಸಮಸ್ಯೆ ಎದುರಿಸುವುದು ಕಂಡುಬಂದರೆ ತಕ್ಷಣ ಚಿಕಿತ್ಸೆ ಕೊಡಿಸಬೇಕು ಎಂದರು.

ಕಾರ್ಖಾನೆಗಳಲ್ಲಿನ ಅತಿಯಾದ ಶಬ್ಧದ ನಡುವೆ ಕೆಲಸ ಮಾಡುವುದು, ಪಟಾಕಿ ಸಿಡಿತ, ಅಬ್ಬರದ ಸಂಗೀತ ಆಲಿಸುವಿಕೆ ಹಾಗೂ ಡಿಜೆಗಳ ಬಳಕೆಯಿಂದ ಶ್ರವಣ ಸಮಸ್ಯೆ ಕಂಡುಬರಲಿದೆ. ಸಮಸ್ಯೆ ಕಂಡುಬಂದ ಕೂಡಲೇ ಚಿಕಿತ್ಸೆ ಪಡೆದರೆ ಶೇ 90ರಷ್ಟು ಗುಣಪಡಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಮೊಬೈಲ್‌ನಲ್ಲಿ ಹಿಯರ್ ಫೋನ್ ಬಳಸಿ ಹೆಚ್ಚು ಹೊತ್ತು ಮಾತನಾಡುವುದು, ಸಂಗೀತ ಕೇಳುವುದು ಸಹ ಕಿವಿಗೆ ಅಪಾಯ. ಮೊಬೈಲ್‌ನಲ್ಲಿರುವ ಸಾಮಾನ್ಯ ಸ್ಪೀಕರ್‌ನಿಂದ ಸಂಗೀತ ಆಲಿಸುವುದು ಹಾಗೂ ಕರೆಗಳನ್ನು ಸ್ವೀಕರಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನೋಡೆಲ್ ಅಧಿಕಾರಿ ಡಾ. ಶ್ರೀರಾಮರಾವ್, ದೇಶದಲ್ಲಿ 100 ರಲ್ಲಿ 6 ಜನರಿಗೆ ಶ್ರವಣ ಸಮಸ್ಯೆ ಇದೆ. 100 ನವಜಾತ ಶಿಶುಗಳಲ್ಲಿ 2 ಶಿಶುಗಳಿಗೆ ಕಿವುಡು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಕೊಡಮಾಡುವ ಎಲ್ಲ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ತಿಳಿಸಿದರು.

ಶ್ರವಣ ಸಮಸ್ಯೆ ಇದ್ದರೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಶ್ರವಣ ಸಮಸ್ಯೆ ಕುರಿತು ಜಿಲ್ಲೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಶ್ರವಣ ಸಮಸ್ಯೆ ಇರುವವರಿಗೆ ರೆಡ್‌ಕ್ರಾಸ್ ಸಹಯೋಗದಲ್ಲಿ ಉಚಿತ ಶ್ರವಣ ಸಾಧನ ವಿತರಿಸಲು ಕ್ರಮ ಕೈಗೊಂಡಿದ್ದು, ಅಗತ್ಯವಿರುವವರು ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು.

ಡಿಎಚ್‌ಒ ಡಾ.ಸುದೀರ್ ಚಂದ್ರ ಸೂಡಾ ಅಧ್ಯಕ್ಷತೆ ವಹಿಸಿದ್ದರು. ಶ್ರವಣ ದೋಷ ಅರಿವು ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಪೊಲೀಸ್ ಸಿಬ್ಬಂದಿಗೆ ಉಚಿತ ಶ್ರವಣ ಪರೀಕ್ಷಾ ಶಿಬಿರ ನಡೆಸಲಾಯಿತು. ಆಡಿಯೋಮೆಟ್ರಿಕ್ ಸಹಾಯಕಿ ಸಮೀಕ್ಷಾ ಡಿ. ರಾವ್ ಸ್ವಾಗತಿಸಿದರು, ಆಡಿಯಾಲಜಿಸ್ಟ್ ಪ್ರತೀಕ್ಷಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.