ಕುಂದಾಪುರ: ಭೂಮಿ ತಾಯಿಯನ್ನು ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ರಾಜು ಎನ್. ಹೇಳಿದರು.
ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ವಕೀಲರ ಸಂಘ, ಅಭಿಯೋಗ ಇಲಾಖೆ ಹಾಗೂ ತಾಲ್ಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ‘ಭೂಮಿ ದಿನದ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ದಿನಾಚರಣೆಯ ಹಿಂದೆಯೂ ನಿರ್ದಿಷ್ಟ ಉದ್ದೇಶ ಇರಿಸಿಕೊಳ್ಳಲಾಗುತ್ತದೆ. ಭೂಮಿ ಎಂದರೆ ಕಂದಾಯ, ಅರಣ್ಯ, ಕೃಷಿ, ತೋಟಗಾರಿಕೆಗೆ ಇಲಾಖೆಗಷ್ಟೇ ಸೀಮಿತವಾಗಿಲ್ಲ. ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ಈ ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಲಾಭದ ಉದ್ದೇಶ ಇರಿಸಿಕೊಂಡು ಇಂದು ಭೂಮಿಯ ಸ್ವರೂಪವನ್ನೇ ಬದಲಿಸಲಾಗುತ್ತಿದೆ. ಪ್ರಕೃತಿ ಹೋಗಿ ವಿಕೃತಿ ಆದಾಗ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ. ಪ್ರಕೃತಿದತ್ತವಾದ ಭೂಮಿಯನ್ನು ಅದೇ ರೂಪದಲ್ಲಿ ಕಾಪಾಡಿಕೊಳ್ಳುವ ಹೊಣೆ ಎಲ್ಲರದ್ದಾಗಬೇಕು ಎಂದರು.
ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಂಜುಳಾ ಬಿ., ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಎಸ್., ಕುಂದಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ., ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ ಇದ್ದರು. ಉಪ ತಹಶೀಲ್ದಾರ್ ವಿನಯ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.