ADVERTISEMENT

ಭಕ್ತರ ತೃಪ್ತಿಯೇ ಭಗವಂತನ ಪೂಜೆ: ವಿಶ್ವಪ್ರಿಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 13:33 IST
Last Updated 14 ಡಿಸೆಂಬರ್ 2018, 13:33 IST
ಅದಮಾರು ಮಠದ ವಿಶ್ವ ಪ್ರಿಯ ಸ್ವಾಮೀಜಿ ಹಾಗೂ ಕಿರಿಯ ಈಶ ಪ್ರಿಯ ಸ್ವಾಮೀಜಿ
ಅದಮಾರು ಮಠದ ವಿಶ್ವ ಪ್ರಿಯ ಸ್ವಾಮೀಜಿ ಹಾಗೂ ಕಿರಿಯ ಈಶ ಪ್ರಿಯ ಸ್ವಾಮೀಜಿ   

ಉಡುಪಿ: ‘ಶ್ರೀಮಠಕ್ಕೆ ನೊಂದುಕೊಂಡು ಬರುವ ಭಕ್ತರಲ್ಲಿ ದೇವರನ್ನು ಕಾಬೇಕಿದೆ. ಅವರ ಮುಖದಲ್ಲಿ ಮಂದಹಾಸ ಮೂಡಿಸುವುದೇ ನಮ್ಮ ಪರ್ಯಾಯದ ಯೋಜನೆ' ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ತೀರ್ಥ ಯಾತ್ರೆಗೆಂದು ಬರುವ ಭಕ್ತರ ಮನಸ್ಸಿನಲ್ಲಿ ಮೂಡುವ ತೃಪ್ತಿಯೇ ಭಗವಂತನಿಗೆ ಮಾಡುವ ಸೇವೆಯಾಗಿದೆ. ಹಾಗಾಗಿ, ಪರ್ಯಾಯಕ್ಕೆ ಇದುವರೆಗೆ ಯಾವುದೇ ಯೋಜನೆಗಳನ್ನು ಹಾಕಿಕೊಂಡಿಲ್ಲ. ಭಕ್ತರಿಗೆ ಉತ್ತಮವಾದ ಧಾರ್ಮಿಕ ಸೇವೆ ನೀಡಿದರೆ, ಅವರು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ದೇವರನ್ನು ಯಾರು ನೋಡಿಲ್ಲ, ಆದರೆ, ನೋಡಬೇಕು ಎನ್ನುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಮಧ್ವಚಾರ್ಯರು ಹೇಳಿದಂತೆ ದೇವರನ್ನು ಪ್ರತಿಮೆಯಲ್ಲಿ ನೋಡುತ್ತೇನೆ ಎಂಬ ದೃಷ್ಟಿಯಿಟ್ಟಕೊಳ್ಳದೆ ನೊಂದವರಿಗೆ ವೈದ್ಯಕೀಯ, ಶಿಕ್ಷಣ, ಆರೋಗ್ಯ ಸೇರಿದಂತೆ ಇತರ ಸೇವೆಗಳನ್ನು ನೀಡಿದರೆ ಅದು ಭಗವಂತನಿಗೆ ಸಲ್ಲುವ ಸೇವೆ’ ಎಂದರು.

ADVERTISEMENT

ಮಠಕ್ಕೆ ಬರುವ ಯಾತ್ರಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಾನಸಿಕ ನೆಮ್ಮದಿ ಅರಸಿ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡುತ್ತಾರೆ. ಅಂತಹವರಿಗೆ ಭಗವಂತನ ಸೇವೆಯನ್ನು ನೀಡಿದರೆ ಅವರ ಮಾನಸಿಕ ಸಮಸ್ಯೆಗಳು ದೂರವಾಗಿ ಮುಖದಲ್ಲಿ ಸಂತೃಪ್ತಿ ಭಾವ ಮೂಡುತ್ತದೆ. ನೊಂದು ಬಂದವರು ಹಿಂದೆ ಹೋಗುವಾಗ ಸಂತೋಷದಿಂದ ಹೋಗಬೇಕು ಎಂದರು.

ಅದಮಾರು ಕಿರಿಯ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಕೃಷ್ಣಮಠದಲ್ಲಿ ಭಕ್ತರಿಗೆ ದೇವರ ಪ್ರಸಾದ ವಿತರಿಸಲು ಬಾಳೆ ಎಲೆಯೇ ಬೇಕು. ಆದರೆ, ಅಗತ್ಯ ಪ್ರಮಾಣದಲ್ಲಿ ಬಾಳೆ ಎಲೆ ಸಿಗುತ್ತಿಲ್ಲ. ಲಾಭ ಇಲ್ಲ ಎನ್ನುವ ಕಾರಣಕ್ಕೆ ರೈತರು ಕೃಷಿಯಿಂದ ದೂರವಾಗಿ ಪರಾವಲಂಬಿಗಳಾಗುತ್ತಿದ್ದಾರೆ. ಈ ಸಮಸ್ಯೆಗಳನ್ನು ದೂರ ಮಾಡಲು ಹೆಬ್ರಿಯ ಚಾರ ಗ್ರಾಮದಲ್ಲಿ ಬಾಳೆ ತೋಟ ಬೆಳೆಸಲಾಗುತ್ತಿದೆ ಎಂದು ಹೇಳಿದರು.

ಈ ಯೋಜನೆಯಿಂದ ರೈತರಿಗೂ ಲಾಭವಾಗಲಿದೆ, ಕೃಷ್ಣನ ಸೇವೆಯೂ ನಡೆದಂತಾಗುತ್ತದೆ. ಸಂಪ್ರದಾಯಗಳನ್ನು ಉಳಿಸುವುದರ ಜೊತೆಗೆ, ಪರಿಸರದೊಂದಿಗೆ ಬದುಕುವುದಕ್ಕೆ ಪ್ರೋತ್ಸಾಹ ನೀಡುವುದು ಮಠದ ಉದ್ದೇಶ ಎಂದು ಹೇಳಿದರು.

ಕೃಷಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ವಿದ್ವಾಂಸರ ಮೂಲಕ ಪ್ರಚನಗಳನ್ನು ನಡೆಸಲಾಗುವುದು. ಈಚೆಗೆ ಪುರಾತನ ತಾಮ್ರದ ಪಾತ್ರೆಗಳ ಮರುಬಳಕೆಗೆ ಪ್ರೋತ್ಸಾಹ ನೀಡಲು ಪಾತ್ರೆಗಳಿಗೆ ಕಲಾಯಿ ಹಾಕುವ ಕಾರ್ಯಾಗಾರ ನಡೆಸಲಾಗಿತ್ತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.