ADVERTISEMENT

ಬೀದಿಗೆ ಬಿದ್ದವರಿಗೊಂದು ಸೂರು ಕೊಡಿ

ಜಿಲ್ಲೆಯಲ್ಲಿ ನಿರ್ಗತಿಕರ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಸಾಮಾಜಿಕ ಕಾರ್ಯಕರ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 16:01 IST
Last Updated 18 ಜುಲೈ 2023, 16:01 IST
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿ ಹಾಗೂ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಸಹಯೋಗದಲ್ಲಿ ಉಡುಪಿಯ ಪತ್ರಿಕಾ ಭವನದಲ್ಲಿ ಮಂಗಳವಾರ ಸಾಮಾಜಿಕ ಕಾರ್ಯಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವಿಶುಶೆಟ್ಟಿ ಅಂಬಲಪಾಡಿ, ಈಶ್ವರ್ ಮಲ್ಪೆ, ನಿತ್ಯಾನಂದ ಒಳಕಾಡು, ಗಣೇಶ್‌ರಾಜ್ ಸರಳೆಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿ ಹಾಗೂ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಸಹಯೋಗದಲ್ಲಿ ಉಡುಪಿಯ ಪತ್ರಿಕಾ ಭವನದಲ್ಲಿ ಮಂಗಳವಾರ ಸಾಮಾಜಿಕ ಕಾರ್ಯಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವಿಶುಶೆಟ್ಟಿ ಅಂಬಲಪಾಡಿ, ಈಶ್ವರ್ ಮಲ್ಪೆ, ನಿತ್ಯಾನಂದ ಒಳಕಾಡು, ಗಣೇಶ್‌ರಾಜ್ ಸರಳೆಬೆಟ್ಟು ಅವರನ್ನು ಸನ್ಮಾನಿಸಲಾಯಿತು.   

ಉಡುಪಿ: ಅಸಹಾಯಕರಾಗಿ ಬೀದಿಗೆ ಬೀಳುವ ಮಹಿಳೆಯರು, ಮಕ್ಕಳು ಹಾಗೂ ನಿರ್ಗತಿಕರಿಗೆ ಜಿಲ್ಲೆಯಲ್ಲಿ ಪುನರ್ವಸತಿ ವ್ಯವಸ್ಥೆ ಇಲ್ಲದಿರುವುದು ಸಮಾಜ ತಲೆತಗ್ಗಿಸುವ ವಿಚಾರ ಎಂದು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿ ಹಾಗೂ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ಸಹಯೋಗದಲ್ಲಿ ಉಡುಪಿಯ ಪತ್ರಿಕಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ನೊಂದು, ಮಾನಸಿಕ ಖಿನ್ನತೆಗೆ ಸಿಲುಕಿ, ಅಸ್ವಸ್ಥರಾಗಿ ಬೀದಿಗೆ ಬೀಳುತ್ತಿರುವವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವಾಗಿದೆ.

ಜಿಲ್ಲೆಯಲ್ಲಿ ನಿರ್ಗತಿಕರ ಪುನರ್ವಸತಿ ಕೇಂದ್ರ ಇಲ್ಲದೆ ಹೊರ ಜಿಲ್ಲೆ, ರಾಜ್ಯಗಳಿಗೆ ಕರೆದೊಯ್ಯಬೇಕಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಚಿಕಿತ್ಸಾ ಸೌಲಭ್ಯಗಳಿಲ್ಲ. ಪುನರ್ವಸತಿ ಕೇಂದ್ರ ಸ್ಥಾಪಿಸುವಂತೆ 20 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜೀವರಕ್ಷಕ ಈಶ್ವರ ಮಲ್ಪೆ ಮಾತನಾಡಿ, ‘ಮಲ್ಪೆ ಬಂದರಿನಲ್ಲಿ ತುಂಬಿರುವ ಹೂಳಿನಲ್ಲಿ ಸಿಲುಕಿ ನೂರಾರು ಬಡ ಕಾರ್ಮಿಕರು, ಮೀನುಗಾರರು ಮೃತಪಟ್ಟಿದ್ದಾರೆ. ಹೂಳಿನಡಿ ಶವಗಳು ಸಿಲುಕಿ ಗೌರವಯುತ ಅಂತ್ಯಸಂಸ್ಕಾರ ಮಾಡಲು ಕುಟುಂಬದ ಸದಸ್ಯರಿಗೆ ಸಾಧ್ಯವಾಗುತ್ತಿಲ್ಲ. ಹೂಳಿನ ಕಾರಣಕ್ಕೆ ಪ್ರತಿ ವರ್ಷಕ್ಕೆ ಕನಿಷ್ಠ 25 ರಿಂದ 30 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಲ್ಪೆ ಬಂದರಿನ ಹೂಳೆತ್ತುವ ಕಾರ್ಯ ನಿರಂತರವಾಗಿ ನಡೆದರೆ ನೂರಾರು ಮಂದಿಯ ಜೀವ ಉಳಿಯಲಿದೆ’ ಎಂದರು.

ಮಲ್ಪೆ ಬಂದರಿನಲ್ಲಿ ನೂರಾರು ಕೋಟಿ ವಹಿವಾಟು ನಡೆದರೂ ಪ್ರಾಣಾಪಾಯಕ್ಕೆ ಸಿಲುಕುವವರ ರಕ್ಷಣೆಗೆ ಸೀ ಆಂಬುಲೆನ್ಸ್‌ ಸೌಲಭ್ಯ ಇಲ್ಲ. ಹಾಗೆಯೇ, ನಿರ್ಗತಿಕರು, ಅಸಹಾಯಕರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಐದು ಎಕರೆ ಜಾಗ ನೀಡಬೇಕು ಎಂದು ಆಗ್ರಹಿಸಿದರು.

ಸಮಾಜಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, ‘ಅನಾಥ ಮಕ್ಕಳನ್ನು ರಕ್ಷಣೆ ಮಾಡಿದರೂ ಸರ್ಕಾರದಿಂದ ಪುನರ್ವಸತಿ ವ್ಯವಸ್ಥೆ, ಕೌನ್ಸೆಲಿಂಗ್ ವ್ಯವಸ್ಥೆ ಇಲ್ಲದೆ ಮತ್ತೆ ಬೀದಿ ಪಾಲಾಗುತ್ತಿದ್ದಾರೆ. ಭಿಕ್ಷುಕರು, ಮಾನಸಿಕ ಅಸ್ವಸ್ಥರಿಗೂ ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲ. ರಕ್ಷಣೆ ಮಾಡಿದವರಿಂದಲೇ ನಿಂದನೆಗೆ ಒಳಗಾಗುವ ಪರಿಸ್ಥಿತಿಯಲ್ಲಿ ಸಾಮಾಜಿಕ ಕಾರ್ಯಕರ್ತರು ಇದ್ದಾರೆ’ ಎಂದರು.

ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ಮಾತನಾಡಿ, ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಾಣಿಜ್ಯ ಚಟುವಟಿಕೆಗಳು ನಡೆಯುವ ಮಣಿಪಾಲದಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ತುರ್ತು ನೆರವಿಗೆ ಧಾವಿಸಲು ಅಗ್ನಿಶಾಮಕ ದಳ ಇಲ್ಲವಾಗಿದೆ. ಬೆಳೆಯುತ್ತಿರುವ ಉಡುಪಿಯಲ್ಲಿ ವಿದ್ಯುತ್ ಚಿತಾಗಾರ ಅಗತ್ಯವಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಸಿಗಬೇಕು, ‘169ಎ’ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕು, ಕಾಡು ಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಸ್ಕೃತಿ ಸಿರಿ ಟ್ರಸ್ಟ್‌ನ ಆಡಳಿತ ವಿಶ್ವಸ್ಥರಾದ ಪ್ರೊ.ಮುಳೀಧರ ಉಪಾಧ್ಯ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಇದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಪತ್ರಕರ್ತ ಶಶಿಧರ ಮಾಸ್ತಿಬೈಲು ಸಾಮಾಜಿಕ ಕಾರ್ಯಕರ್ತರನ್ನು ಪರಿಚಯಿಸಿದರು. ರಜತ ಮಹೋತ್ಸವ ಸಮಿತಿ ಸಂಚಾಲಕ ಮುಹಮ್ಮದ್ ಶರೀಫ್ ವಂದಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮೈಕಲ್ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

‘ಮಹಿಳೆಯರು ಮಕ್ಕಳಿಗೆ ಇಲ್ಲ ರಕ್ಷಣೆ’
ಎಚ್‌ಐವಿ ಹಾಗೂ ಕ್ಷಯ ಸೋಂಕಿತ ನಿರ್ಗತಿಕ ಮಾನಸಿಕ ಅಸ್ವಸ್ಥ ಮಹಿಳೆಯರು ಬೀದಿಯಲ್ಲಿ ಅಲೆಯುತ್ತಿದ್ದರೂ ರಕ್ಷಣೆ ಮಾಡುವ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವ ಕೆಲಸ ಸಂಬಂಧಪಟ್ಟ ಇಲಾಖೆಗಳಿಂದ ನಡೆಯುತ್ತಿಲ್ಲ. ಪರಿಣಾಮ ಎಚ್‌ಐವಿ ಹಾಗೂ ಕ್ಷಯ ಸೋಂಕು ಹರಡುವ ಆತಂಕ ಎದುರಾಗಿದೆ. ಸೂಕ್ತ ರಕ್ಷಣೆ ಇಲ್ಲದೆ ಅಸಹಾಯಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಮಹಿಳೆಯರಿಗೆ ಮಕ್ಕಳಿಗೆ ವೃದ್ಧರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಸರ್ಕಾರ ತೋರ್ಪಡಿಕೆಗಾಗಿ ಮಹಿಳಾ ದಿನಾಚರಣೆ ಹಿರಿಯ ನಾಗರಿಕರ ದಿನಾಚರಣೆ ಮಕ್ಕಳ ದಿನಾಚರಣೆ ವೃದ್ಧರ ದಿನಾಚರಣೆ ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ವಿಶುಶೆಟ್ಟಿ ಅಂಬಲಪಾಡಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.