ADVERTISEMENT

ಯಕ್ಷಗಾನ ವಿಕಾಸ ಹೊಂದಿದ ಪ್ರದರ್ಶನ ಕಲೆ

‘ರುರು ಪ್ರಮದ್ವರಾ’ ಕೃತಿ ಬಿಡುಗಡೆ: ಗುಂಡ್ಮಿ ಸದಾನಂದ ಐತಾಳ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 4:01 IST
Last Updated 26 ಜುಲೈ 2021, 4:01 IST
ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಶನಿವಾರ ಉಪನ್ಯಾಸಕ ಸುಜಯೀಂದ್ರ ಹಂದೆ ಅವರ ಯಕ್ಷಗಾನ ಪ್ರಸಂಗ ‘ರುರು ಪ್ರಮದ್ವರಾ’ ಕೃತಿ ಬಿಡುಗಡೆ ಮಾಡಲಾಯಿತು
ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಶನಿವಾರ ಉಪನ್ಯಾಸಕ ಸುಜಯೀಂದ್ರ ಹಂದೆ ಅವರ ಯಕ್ಷಗಾನ ಪ್ರಸಂಗ ‘ರುರು ಪ್ರಮದ್ವರಾ’ ಕೃತಿ ಬಿಡುಗಡೆ ಮಾಡಲಾಯಿತು   

ಕೋಟ (ಬ್ರಹ್ಮಾವರ): ‘ಪ್ರಸಂಗ ಸಾಹಿತ್ಯವು ಕಥನ ಕಾವ್ಯವಾಗಿದ್ದು, ಯಕ್ಷಗಾನ ಗಾನ ಪ್ರಬಂಧವಾಗಿದ್ದು, ಮತ್ತೆ ಅದು ವಿಕಾಸ ಹೊಂದುತ್ತಾ ಪ್ರದರ್ಶನ ಕಲೆಯಾಯಿತು’ ಎಂದು ಯಕ್ಷಗಾನ ವಿದ್ವಾಂಸ ಗುಂಡ್ಮಿ ಸದಾನಂದ ಐತಾಳ ಹೇಳಿದರು.

ತೆಕ್ಕಟ್ಟೆಯಲ್ಲಿ ಶನಿವಾರ ಕೊಮೆ ಯಶಸ್ವಿ ಕಲಾವೃಂದ, ಮಲ್ಯಾಡಿ ಲೈವ್ ಡಾಟ್ ಕಾಂ ಮತ್ತು ಸಾಲಿಗ್ರಾಮ ಮಕ್ಕಳ ಮೇಳ ಆಯೋಜಿಸಿದ್ದ ಉಪನ್ಯಾಸಕ ಸುಜಯೀಂದ್ರ ಹಂದೆ ಅವರ ಯಕ್ಷಗಾನ ಪ್ರಸಂಗ ’ರುರು ಪ್ರಮದ್ವರಾ’ ಕೃತಿ ಅನಾವರಣ ಮಾಡಿ ಮಾತನಾಡಿದರು.

ಸಂಸ್ಕೃತ ಪೌರಾಣಿಕ ಮಹಾಕಾವ್ಯಗಳು ಯಕ್ಷಗಾನ ಪ್ರಸಂಗದ ಮೂಲಕ ಜನ ಸಾಮಾನ್ಯರನ್ನು ತಲುಪಿವೆ. ಕಾಲ್ಪನಿಕ ಪ್ರಸಂಗಗಳ ಆಯುಷ್ಯ ಕಡಿಮೆ. ಪೌರಾಣಿಕ ಪ್ರಸಂಗಗಳ ಪಾತ್ರಗಳು ಆಳವಾಗಿ ವಿಸ್ತಾರವಾಗಿ ಬೆಳೆಯ ಬಲ್ಲವಾಗಿದ್ದರಿಂದಲೇ ಅವು ನಿತ್ಯ ನೂತನವಾಗಿವೆ. ಕಥಾ ವಸ್ತು, ಸಾಹಿತ್ಯ, ತಂತ್ರ, ಪದ ರಚನಾ ಕೌಶಲ, ಸಾಂದರ್ಭಿಕ ಛಂದೋಬಂಧಗಳು ಮತ್ತು ಪ್ರದರ್ಶನದ ಪರಿಣಾಮದ ದೃಷ್ಟಿಯಿಂದ ಯಾವುದೇ ಯಕ್ಷಗಾನ ಪ್ರಸಂಗ ಮೌಲ್ಯವನ್ನು ಪಡೆಯಬಲ್ಲದು ಎಂದು ಹೇಳಿದರು.

ADVERTISEMENT

ಸುಜಯೀಂದ್ರ ಹಂದೆ ಅವರ ‘ರುರು ಪ್ರಮದ್ವರಾ ಯಕ್ಷಗಾನ ಪ್ರಸಂಗ’ವು ಒಂದು ಪ್ರೇಮ ಕಾವ್ಯ. ಪ್ರೀತಿ ಪ್ರೇಮ ಎಂಬುದು ಮಾನವನಿಗೆ ಹುಟ್ಟಿನಿಂದ ಅಂಟಿಕೊಂಡದ್ದು. ಯಾವುದೇ ಸಿನಿಮಾ, ನಾಟಕ, ಸಾಹಿತ್ಯವನ್ನು ಗಮನಸಿದರೂ ಅಲ್ಲಿ ಪ್ರೇಮ ಎನ್ನುವುದು ಸಹಜ ವಸ್ತುವಾಗಿ ಮೂಡಿ ಬಂದಿದೆ. ಸುಜಯೀಂದ್ರರು ತಮ್ಮ ಕೃತಿಯಲ್ಲೂ ಪ್ರೇಮ ಎಂಬುದನ್ನು ಅಮರ ಕಾವ್ಯವಾಗಿ ಚಿತ್ರಿಸಿದ್ದಾರೆ ಎಂದು ಹೇಳಿದರು.

ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುರು ಪೂರ್ಣಿಮೆಯ ಅಂಗವಾಗಿ ಯಕ್ಷಗಾನ ಪ್ರಾಚಾರ್ಯ ಕೆ.ಪಿ. ಹೆಗಡೆ ಮತ್ತು ಸದಾನಂದ ಐತಾಳ ಅವರನ್ನು ಸನ್ಮಾನಿಸಲಾಯಿತು.

ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಬೆಂಗಳೂರಿನ ಯಕ್ಷ ದೇಗುಲದ ಸುದರ್ಶನ ಉರಾಳ, ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಜನಾರ್ದನ ಹಂದೆ, ಭಾಗವತ ಲಂಭೋದರ ಹೆಗಡೆ, ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ ಇದ್ದರು.

ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತನಾಡಿದರು. ಪ್ರಶಾಂತ ಮಲ್ಯಾಡಿ ವಂದಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು.

ಭಾಗವತರಾದ ಕೆ.ಪಿ. ಹೆಗಡೆ, ಲಂಭೋದರ ಹೆಗಡೆ, ಪ್ರಸಾದ ಕುಮಾರ ಮೊಗೆಬೆಟ್ಟು, ಮದ್ದಳೆ ವಾದಕ ರಾಘವೇಂದ್ರ ಹೆಗಡೆ ಯಲ್ಲಾಪುರ, ಚೆಂಡೆ ವಾದಕ ಕೋಟ ಶಿವಾನಂದ ಮತ್ತು ಸುದೀಪ ಉರಾಳರ ಹಿಮ್ಮೇಳದಲ್ಲಿ ‘ರುರು ಪ್ರಮದ್ವರಾ’ ಪ್ರಸಂಗದ ಗಾನ ಸುಧಾ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.