ಉಡುಪಿ: ‘ಯಕ್ಷಗಾನ ಜನರಿಗೆ ಮನೋರಂಜನೆ ನೀಡುವುದರ ಜತೆಗೆ ಮುಖ್ಯವಾಗಿ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಹೇಳಿದರು.
ಅಂಬಲಪಾಡಿಯಲ್ಲಿ ಸೋಮವಾರ ನಡೆದ ಯಕ್ಷಗಾನ ಕಲಾವಿದರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಯಕ್ಷಗಾನದ ಅಭ್ಯುದಯಕ್ಕೆ ಕಲಾವಿದರು ಮುಖ್ಯ, ಹಾಗೆಯೇ ಸಂಘಟಕರೂ ಮುಖ್ಯ. ಯಕ್ಷಗಾನ ಸಂಘಟನೆ ಮಾಡುತ್ತಿರುವ ಸಹೃದಯರಿಗೆ ಅಭಿನಂದನೆ ಸಲ್ಲಬೇಕು ಎಂದರು.
ಕಟೀಲು ಮೇಳದ ಹಿರಿಯ ಮದ್ದಲೆಗಾರ ಚಿಪ್ಪಾರು ಮರಿಯಯ್ಯ ಬಲ್ಲಾಳ, ಹಿರಿಯ ಹಾಸ್ಯಗಾರ ರವಿಶಂಕರ ವಳಕ್ಕುಂಜ, ಪ್ರತಿಭಾಶಾಲಿ ಪುಂಡುವೇಷಧಾರಿ ವೆಂಕಟೇಶ ಕಲ್ಲುಗುಂಡಿ ಮತ್ತು ನೇಪಥ್ಯ ಕಲಾವಿದರಾದ ಕುಪ್ಪೆಪದವು ಸುರೇಶ ಅವರನ್ನು ಸನ್ಮಾನಿಸಿ ‘ಪವಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ರವಿಶಂಕರ ವಳಕ್ಕುಂಜ ಸನ್ಮಾನಿತರ ಪರವಾಗಿ ಕೃತಜ್ಞತೆ ನುಡಿಗಳನ್ನಾಡಿದರು. ಡಾ. ಶ್ರುತಕೀರ್ತಿ ರಾಜ್ ಅಭಿನಂದನ ನುಡಿಗಳನ್ನಾಡಿದರು. ಎಂಜಿನಿಯರ್ ಪಿ.ದಿನೇಶ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು. ಯಕ್ಷಗಾನ ಕಲಾರಂಗದ ನಾರಾಯಣ ಎಂ.ಹೆಗಡೆ, ವಿದ್ಯಾಪ್ರಸಾದ್, ಅಜಿತ್ ಕುಮಾರ್, ಅನಂತರಾಜ ಉಪಾಧ್ಯ, ಗಣೇಶ್ ಬ್ರಹ್ಮಾವರ, ಆನಂದ ಶೆಟ್ಟಿ ಉಪಸ್ಥಿತರಿದ್ದರು.
ಪರಶುರಾಮ ಶೆಟ್ಟಿ ಮತ್ತು ವಿಜಯಾ ಪಿ.ಶೆಟ್ಟಿ ದಂಪತಿಯನ್ನು ಮರುಳಿ ಕಡೆಕಾರ್ ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.