ಉಡುಪಿ: ಹಿರಿಯರ ಹಾಗೂ ಋಷಿಮುನಿಗಳ ಸಾವಿರಾರು ವರ್ಷಗಳ ಸಂಶೋಧನೆಯಿಂದ ಯೋಗದ ಫಲ ದೊರಕಿದೆ. ಯೋಗಾಭ್ಯಾಸದಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಆಯುಷ್ ಇಲಾಖೆಯಲ್ಲಿ ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ನಡೆದ ಆನ್‌ಲೈನ್ ಮೂಲಕ ಯೋಗ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2015ರ ಜೂನ್ 21ರಿಂದ ಯೋಗದಿನವನ್ನು ಸಾಮಾಜಿಕ ಸಂದೇಶದೊಂದಿಗೆ ಆಚರಿಸುತ್ತಾ ಬರಲಾಗಿದ್ದು, ಕೋವಿಡ್ ಸಂದಿಗ್ಧತೆಯ ಪರಿಣಾಮ ಈ ವರ್ಷ ‘ಮನೆಯಲ್ಲಿರಿ ಯೋಗದೊಂದಿಗೆ ಇರಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಯೋಗದ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಬೇಕು. ಆಯುಷ್ ಇಲಾಖೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಕೋವಿಡ್ ನಿಯಂತ್ರಣಕ್ಕೆ ಯೋಗದೊಂದಿಗೆ ಆಯುರ್ವೇದದ ಮಹತ್ವವನ್ನು ಜನರಿಗೆ ತಲುಪಿಸಬೇಕು ಎಂದರು.
ಯೋಗ ಕೇಂದ್ರ ನಡೆಸಲು ಆಯುಷ್ ಇಲಾಖೆಯಲ್ಲಿ ಕೊರತೆಗಳಿದ್ದರೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಸಂಸದೆ ಭರವಸೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಪ್ರಕಾಶ್ ನಾಯ್ಕ್ ಮಾತನಾಡಿ, ಕೊರೊನಾ ಜಾಗೃತಿಯೊಂದಿಗೆ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಯೋಗ ತರಬೇತಿ ನೀಡಲಾಗುತ್ತಿದೆ. ಮನೆಯಲ್ಲಿ ಐಸೋಲೇಷನ್ ಇದ್ದವರಿಗೂ ಆನ್‌ಲೈನ್ ಮೂಲಕ ಯೋಗಾಭ್ಯಾಸ ಮಾಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಪಿಜಿಎಸ್‌ಎಸ್‌ನ ಜಿಲ್ಲಾ ಶಿಕ್ಷಣ ಪ್ರಮುಖ ಲಲಿತಾ ಕೆದ್ಲಾಯ, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ಇದ್ದರು. ಡಾ. ವೀಣಾ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.