
ಕಾರ್ಕಳ: ಯುವಜನರು ಭಾರತದ ಮೂಲ ಸಂಪತ್ತು. ನಮ್ಮ ಮೂಲ ಸೌಕರ್ಯಗಳನ್ನು ವಿಜ್ಞಾನಕ್ಕೆ ಒದಗಿಸಬೇಕು. ಹಾಗೆ ಒದಗಿಸಿದಾಗ ವಿಜ್ಞಾನಿಗಳು ನಮ್ಮ ದೇಶಕ್ಕೆ ದಕ್ಕುತ್ತಾರೆ ಎಂಬ ಭರವಸೆ ಎಪಿಜೆ ಅಬ್ದುಲ್ ಕಲಾಂ ಅವರದ್ದಾಗಿತ್ತು ಎಂದು ಕೇಂದ್ರ ಸರ್ಕಾರ ಸಚಿವಾಲಯದ ಡಿ.ಆರ್.ಒ. ಸಂಸ್ಥೆಯ ನಿವೃತ್ತ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶ್ ರಾವ್ ಹೇಳಿದರು.
ಇಲ್ಲಿನ ಭುವನೇಂದ್ರ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ಐಕ್ಯುಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಬ್ದುಲ್ ಕಲಾಂ ಅವರಿಂದ ಭಾರತವು ವೈಜ್ಞಾನಿಕ ನೆಲೆಯಲ್ಲಿ ಪ್ರಯೋಜನ ಪಡೆದುಕೊಂಡಿದೆ. ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಶೇ 65ರಷ್ಟು ಸಲಕರಣೆಗಳನ್ನು ನಾವೇ ಉತ್ಪಾದಿಸುತ್ತಿದ್ದೇವೆ. ಆತ್ಮಾಭಿಮಾನ, ಕೆಲಸದಲ್ಲಿ ಶ್ರದ್ಧೆ ಇದ್ದರೆ ಕಲಾಂ ಅವರಂತಹ ಅದೆಷ್ಟೋ ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ಕೊಡುಗೆಯಾಗಿ ಸಿಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ, ಸಾಮಾನ್ಯ ವ್ಯಕ್ತಿಯೂ ದೇಶದ ಅತ್ಯುನ್ನತ ಹುದ್ದೆಯನ್ನು ತಲುಪಬಹುದು. ಅದೃಷ್ಟದ ಬಾಗಿಲು ಯಾವಾಗಲೂ ಕಠಿಣ ಪರಿಶ್ರಮದಿಂದಲೇ ತೆರೆಯಬೇಕು ಎಂದರು. ಐಕ್ಯುಎಸಿ ನಿರ್ದೇಶಕ ಪ್ರೊ. ಲಕ್ಷೀನಾರಾಯಣ ಕೆ.ಎಸ್, ಕಾರ್ಯದರ್ಶಿ ಕೀರ್ತಿ ಕೆ. ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಈಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆರಿನಾ ನಿರೂಪಿಸಿದರು. ಜಾಯ್ಸಿಲ್ ಸ್ವಾಗತಿಸಿದರು. ವಿಜ್ಞಾನ ಸಂಘದ ಸಂಯೋಜಕಿ ವಿಜಯ ಕುಮಾರಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.