ADVERTISEMENT

ಯಂಗ್ ಇಂಡಿಯಾ ಕೆ ಬೋಲ್‌ ಸ್ಪರ್ಧೆ

ಯುವ ಕಾಂಗ್ರೆಸ್‌ ವಕ್ತಾರರ ಆಯ್ಕೆಗೆ ಭಾಷಣ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 11:59 IST
Last Updated 12 ಅಕ್ಟೋಬರ್ 2021, 11:59 IST
‘ಯಂಗ್ ಇಂಡಿಯಾ ಕೆ ಬೋಲ್‌’ ರಾಷ್ಟ್ರೀಯ ಭಾಷಣ ಸ್ಪರ್ಧೆಯ ಪೋಸ್ಟರ್ ಅನ್ನು ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಕೋಟ್ಯಾನ್ ಬಿಡುಗಡೆಗೊಳಿಸಿದರು.
‘ಯಂಗ್ ಇಂಡಿಯಾ ಕೆ ಬೋಲ್‌’ ರಾಷ್ಟ್ರೀಯ ಭಾಷಣ ಸ್ಪರ್ಧೆಯ ಪೋಸ್ಟರ್ ಅನ್ನು ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಕೋಟ್ಯಾನ್ ಬಿಡುಗಡೆಗೊಳಿಸಿದರು.   

ಉಡುಪಿ: ಫ್ಯಾಸಿಸ್ಟ್ ಬಿಜೆಪಿ ಸರ್ಕಾರದ ವಿರುದ್ಧ ಯುವ ಜನಾಂಗ ಧನಿ ಎತ್ತಲು ಕಾಂಗ್ರೆಸ್‌ ವೇದಿಕೆ ಸಿದ್ಧಪಡಿಸಿದ್ದು ರಾಷ್ಟ್ರದಾದ್ಯಂತ ‘ಯಂಗ್ ಇಂಡಿಯಾ ಕೆ ಬೋಲ್‌’ ಎಂಬ ರಾಷ್ಟ್ರೀಯ ಭಾಷಣ ಸ್ಪರ್ಧೆ ಆಯೋಜಿಸಿದೆ ಎಂದು ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಕೋಟ್ಯಾನ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡುವ 18 ರಿಂದ 35 ವರ್ಷದೊಳಗಿನ ಯುವಕ ಯುವತಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಜಾಪ್ರಭುತ್ವ ಮೌಲ್ಯಗಳ ಕಗ್ಗೊಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೊರೊನಾ ತಡೆಯಲು ಸರ್ಕಾರದ ನಿರ್ಲಕ್ಷ್ಯ ಹಾಗೂ ಹಣದುಬ್ಬರ ತಡೆಯುವಲ್ಲಿ ಸರ್ಕಾರ ವಿಫಲ ಎಂಬ ನಾಲ್ಕು ವಿಷಯಗಳ ಕುರಿತು ಸ್ಪರ್ಧಿಗಳು ಮೂರು ನಿಮಿಷಗಳ ಭಾಷಣ ಮಾಡಬೇಕು. ತಿಳಿದಿರುವ ಭಾಷೆಯಲ್ಲಿ ಭಾಷಣ ಮಾಡಬಹುದು.

ಮೊದಲ ಹಂತದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧೆ ಆಯೋಜಿಸಿ ಐವರು ವಿಜೇತರನ್ನು ಜಿಲ್ಲಾ ವಕ್ತಾರರನ್ನಾಗಿ ನೇಮಕ ಮಾಡಲಾಗುವುದು. ವಿಜೇತರಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ 10 ಮಂದಿಯನ್ನು ರಾಜ್ಯ ವಕ್ತಾರರನ್ನಾಗಿ ನೇಮಿಸಿ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.

ADVERTISEMENT

ನ.14ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಐವರನ್ನು ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ಬಿ.ಶ್ರೀನಿವಾಸ್ ರಾಷ್ಟ್ರೀಯ ವಕ್ತರರನ್ನಾಗಿ ನೇಮಕ ಮಾಡಲಿದ್ದಾರೆ ಎಂದು ದೀಪಕ್ ಕೋಟ್ಯಾನ್ ಮಾಹಿತಿ ನೀಡಿದರು.

ರಾಷ್ಟ್ರೀಯ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು https://forms.gle/JykxwXusa8n7y9Vg7 ಲಿಂಕ್ ಬಳಸಿ ನೋಂದಣಿ ಮಾಡಿಕೊಳ್ಳಬೇಕು. ಅ.27ರಂದು ಬೆಳಿಗ್ಗೆ 10ಕ್ಕೆ ಉಡುಪಿಯ ಕಾಂಗ್ರೆಸ್ ಭವನದಲ್ಲಿ ನಡೆಯುವ ಸ್ಪರ್ಧೆಯಲ್ಲಿ ನೇರವಾಗಿ ನೋಂದಣಿ ಮಾಡಿಸಿ ಭಾಗವಹಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ಸುರಯ್ಯಾ ಅಂಜುಂ, ಪ್ರಧಾನ ಕಾರ್ಯದರ್ಶಿ ಜಾನೆಟ್‌, ಶಬರೀಶ್‌, ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.