ADVERTISEMENT

5 ವರ್ಷಗಳಲ್ಲಿ ₹ 886 ಅನುದಾನ ಬಳಕೆ

ಜಿಲ್ಲಾ ಪಂಚಾಯಿತಿಯ ‍ಅಭಿವೃದ್ಧಿ ಕಾಮಗಾರಿ ವಿವರ ನೀಡಿದ ಅಧ್ಯಕ್ಷ ದಿನಕರ ಬಾಬು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 13:32 IST
Last Updated 22 ಏಪ್ರಿಲ್ 2021, 13:32 IST
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ದಿನಕರ ಬಾಬು ಮಾಹಿತಿ ಸುದ್ದಿಗೋಷ್ಠಿ ನಡೆಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ದಿನಕರ ಬಾಬು ಮಾಹಿತಿ ಸುದ್ದಿಗೋಷ್ಠಿ ನಡೆಸಿದರು.   

ಉಡುಪಿ: ಕಳೆದ 5 ವರ್ಷಗಳಲ್ಲಿ ₹ 886.45 ಜಿಲ್ಲಾ ಪಂಚಾಯಿತಿಯ ಅನುದಾನ ಬಳಸಿಕೊಂಡು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ 5 ವರ್ಷಗಳ ಸಾಧನೆ ಕುರಿತು ಮಾತನಾಡಿ, ಖಜಾನೆ ಮೂಲಕ ₹ 762.55 ಕೋಟಿ ಹಾಗೂ ಬ್ಯಾಂಕ್ ಖಾತೆ ಮೂಲಕ ₹ 123.90 ಕೋಟಿ ಅನುದಾನ ಪಡೆದು ವಿನಿಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸ್ವಚ್ಛಭಾರತ್ ಮಿಷನ್‌ ಯೋಜನೆ ಜಾರಿಗೆ ವಿಶೇಷ ಒತ್ತು ನೀಡಲಾಗಿದ್ದು, ರಾಜ್ಯದಲ್ಲಿಯೇ ಉಡುಪಿಯಲ್ಲಿ ಮೊದಲು ಎಸ್‌ಎಲ್‌ಆರ್‌ಎಂ ಘಟಕಗಳನ್ನು ಆರಂಭಿಸಲಾಯಿತು. ವೇಲೂರು ಶ್ರೀನಿವಾಸನ್ ಮಾರ್ಗದರ್ಶನದಲ್ಲಿ ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸಿ ಸಂಪನ್ಮೂಲವನ್ನಾಗಿ ಮಾಡುವ ಕಾರ್ಯ ನಡೆಯುತ್ತಿದ್ದು, ಪ್ರಸ್ತುತ 110 ಗ್ರಾಮ ಪಂಚಾಯಿತಿಗಳಲ್ಲಿ ಜಾರಿಯಲ್ಲಿದೆ. ಜುಲೈ ಅಂತ್ಯದೊಳಗೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಘಟಕಗಳು ತಲೆ ಎತ್ತಲಿವೆ ಎಂದರು.

ADVERTISEMENT

250 ಕೋಟಿ ವೆಚ್ಚದಲ್ಲಿ ನಿಟ್ಟೆಯಲ್ಲಿ ಎಂಆರ್‌ಎಫ್‌ ಘಟಕ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ. 80 ಬಡಗಬೆಟ್ಟು, ಕುಕ್ಕುಂದೂರು ಗ್ರಾಮ ಪಂಚಾಯಿತಿಗಳಲ್ಲಿ ಮಲ ತ್ಯಾಜ್ಯ ಘಟಕಗಳು ಆರಂಭವಾಗಲಿವೆ ಎಂದರು.

‌ನರೇಗಾ ಯಶಸ್ವಿ‍ ಅನುಷ್ಠಾನ:

‌ಉದ್ಯೋಗ ಖಾತ್ರಿ ಯೋಜನೆಯಡಿ 2015–16ರಲ್ಲಿ ಜಿಲ್ಲೆಯಲ್ಲಿ 2.44 ಮಾನವ ದಿನಗಳ ‍ಸೃಜನೆ ಮಾತ್ರ ಆಗಿತ್ತು. ಪ್ರಸ್ತುತ 6.48 ಲಕ್ಷ ಮಾನವ ದಿನಗಳನ್ನು ಸೃ‍ಜಿಸುವ ಮೂಲಕ ಬಡವರ ಕೈಗಳಿಗೆ ಕೆಲಸ ನೀಡಲಾಗಿದೆ‍. ನರೇಗಾ ಅಡಿ 25,554 ಕಾಮಗಾರಿಗಳನ್ನು ಕೈಗೆತ್ತಿಕೊಂಡು 19,303 ಕಾಮಗಾರಿ ಮುಕ್ತಾಯಗೊಳಿಸಲಾಗಿದೆ. ‍5,342 ಬಾವಿ, 3,506 ಕೊಟ್ಟಿಗೆ, 237.50 ಹೆಕ್ಟೇರ್‌ ತೋಟಗಾರಿಕಾ ಕ್ಷೇತ್ರಗಳ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

‌ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ 474 ಸ್ವಸಹಾಯ ಗುಂಪುಗಳ ರಚಿಸಿ 2,506 ಸದಸ್ಯರು ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂ‍ಜೀವಿನ ಯೋಜನೆಯಲ್ಲಿ ಕೊರಗ ಸಮುದಾಯ ಜೀವನೋಪಾಯಕ್ಕೆ ಪೂರಕವಾಗಿ ಕುಂಭಾಶಿಯಲ್ಲಿ ಸಮುದಾಯ ಹೈನುಗಾರಿಕಾ ಘಟಕ, ಸಮುದಾಯ ಕೋಣಿ ಸಾಕಾಣಿಕೆ, ಚಿಕ್ಕಿ ‍ತಯಾರಿಕಾ ಘಟಕ ನಿರ್ಮಾಣ ಮಾಡಲಾಗುತ್ತದೆ ಎಂದರು.

‌ಗ್ರಾಮೀಣ ಭಾಗಗಳಲ್ಲಿ ₹ 26.30 ಕೋಟಿ ವೆಚ್ಚದಲ್ಲಿ 441.62 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿ, ಶಾಸಕರ ಟಾಸ್ಕ್‌ಫೋರ್ಸ್‌ ಯೋಜನೆಯಡಿ 20.16 ಕೋಟಿ ವೆಚ್ಚದಲ್ಲಿ 584.34 ಕಿ.ಮೀ ರಸ್ತೆಗಳ ಅಭಿವೃದ್ಧಿ, ₹ 22.8 ಕೋಟಿ ವೆಚ್ಚದಲ್ಲಿ 172 ‍ಕಿಂಡಿ ಅಣೆಕಟ್ಟುಗಳ ನಿರ್ಮಾಣ, ₹ 16.55 ಕೋಟಿ ವೆಚ್ಚದಲ್ಲಿ 1,256 ಕಾಮಗಾರಿ ನಿರ್ವಹಿಸಲಾಗಿದೆ.

‌ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ₹ 81.96 ಕೋಟಿ ವೆಚ್ಚದಲ್ಲಿ 1,703 ಕುಡಿಯುವ ನೀರಿನ ಕಾಮಗಾರಿ ಪೂರ್ಣ, ಜಲ್‌ ಜೀವನ್ ಮಿಷನ್ ಅಡಿ ₹ 133.93 ಕೋಟಿ ವೆಚ್ಚದಲ್ಲಿ 344 ಕಾಮಗಾರಿ ‍ಅನುಷ್ಠಾನಕ್ಕೆ‍ ಟೆಂಡರ್ ಕರೆಯಲಾಗಿದೆ ಎಂದರು.

‌ಶಿಕ್ಷಣ ಇಲಾಖೆಗೆ ವೇತನ ಹಾಗೂ ವೇತನೇತ್ತರ ಕಾರ್ಯಕ್ರಮಗಳಿಗೆ ₹ 129.3 ಕೋಟಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ 204 ಶಾಲೆಗಳಿಗೆ ₹ 28.80 ಲಕ್ಷ‍ ವೆಚ್ಚದಲ್ಲಿ ಕ್ರೀಡಾ ಉಪಕರಣ, ಯುವಕ ಸಂಘಗಳಿಗೆ ಅನುದಾನ, ಕ್ರೀಡಾ ಪ್ರೋತ್ಸಾಹ‍ಧನ ನೀಡಲಾಗಿದೆ.

‌ಕುಂದಾಪುರ, ಕಾರ್ಕಳದ‍ಲ್ಲಿ 10 ಹಾಸಿಗೆಗಳ ಆಯುಷ್ ಘಟಕ, ಉಡುಪಿಯಲ್ಲಿ ಜಿಲ್ಲಾ ಆಯುರ್ವೇದ ‍ಆಸ್ಪತ್ರೆ, ಸಮಾಜ ಕಲ್ಯಾಣ ಇಲಾಖೆಯಿಂದ 6,102 ವಿದ್ಯಾರ್ಥಿಗಳಿಗೆ ₹ 12.71 ಕೋಟಿ ವಿದ್ಯಾರ್ಥಿ ವೇತನ‍, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇ‍ಲಾಖೆಯಿಂದ 76,791 ಫಲಾನುಭವಿಗಳಿಗೆ ಪೌಷ್ಟಿಕ ಆಹಾರ, ಕೃಷಿ ಇಲಾಖೆಯಿಂದ ಸಹಾಯಧನ, ಕೃಷಿ ಭಾಗ್ಯ ಯೋ‍ಜನೆ ಜಾರಿ‍, ಟಾರ್ಪಾಲ್ ವಿತರಣೆ ಮಾಡಲಾಗಿದೆ.

‌ತೋಟಗಾರಿಕಾ ಇಲಾಖೆಯಿಂದ ಜೇನುಕೃಷಿ ತರಬೇತಿ, ಸಹಾಯಧನ, 260 ‍ಜಾನುವಾರ ಶಿಬಿರ‍, ಗ್ರಾಮಾಂತರ ಕೈಗಾರಿಕೆ ಇಲಾಖೆಯಿಂದ 1820 ಕುಶಲ ಕರ್ಮಿಗಳಿಗೆ ಸುಧಾರಿತ ಉಪಕರಣ‍, ಮೀನುಗಾರಿಕೆ ಇಲಾಖೆಯಿಂದ ಮತ್ಸ್ಯಸಂರಕ್ಷಣೆ, ಮೀನು ಮಾರುಕಟ್ಟೆ, ಮತ್ಸ್ಯವಾಹಿನಿ ಯೋಜನೆ ಜಾರಿ‍, ರೇಷ್ಮೆ ಇಲಾಖೆಯಿ‍ಂದ ರೇಷ್ಮೆ ಕೃಷಿಕರಿಗೆ 6.86 ಲಕ್ಷ ಸಹಾಯಧನ ‍ನೀಡಲಾಗಿದೆ ಎಂದು ಅಂ‍ಕಿ ಅಂಶಗಳನ್ನು ನೀಡಿದರು.

‌ಈ ಸಂದರ್ಭ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೋಭಾ ಜಿ.ಪುತ್ರನ್‌, ಪ್ರತಾಪ್ ಹೆಗ್ಡೆ ಮಾರಾಳಿ, ಸು‍ಮಿತ್ ಶೆಟ್ಟಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪ ಕಾರ್ಯದರ್ಶಿ ಕಿರಣ್ ಫಡ್ನೆಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.