ADVERTISEMENT

ಕನ್ನಡದ ಘನತೆ ಎತ್ತಿ ಹಿಡಿಯಬೇಕು 

ವೆಂಕಟಗಿರಿಕೋಟೆ ಗ್ರಾಪಂ ಕಾರ್ಯಾಲಯದಲ್ಲಿ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 15:34 IST
Last Updated 1 ನವೆಂಬರ್ 2019, 15:34 IST
ವಿಜಯಪುರ ಹೋಬಳಿ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ವಿಜಯಪುರ ಹೋಬಳಿ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು   

ವಿಜಯಪುರ: ‘ನಾಡಿನ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಸಾಧಕರು ನೀಡಿರುವ ಕೊಡುಗೆಯನ್ನು ಸ್ಮರಿಸುವುದರ ಜತೆಗೆ ಕನ್ನಡದ ಘನತೆಯನ್ನು ರಾಷ್ಟ್ರ, ಅಂತರರಾಷ್ಟ್ರಿಯ ಮಟ್ಟದಲ್ಲಿ ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೋಜಮೂರ್ತಿ ಹೇಳಿದರು.

ಹೋಬಳಿಯ ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಪಂಡಿತ್ ಭೀಮಸೇನ ಜೋಶಿ, ಪಂಚಾಕ್ಷರಿ ಗವಾಯಿ, ಕುಮಾರವ್ಯಾಸ, ಚಾಮರಸ, ನಯಸೇನ, ದುರ್ಗಸಿಂಹ, ಆದಯ್ಯ, ಪುಲಿಗೆರೆ ಸೋಮನಾಥ, ಮುಕ್ತಾಯಕ್ಕ, ಶ್ರೀಧರಾಚಾರ್ಯ ಅವರು ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಆಧುನಿಕ ಯುಗದಲ್ಲಿ ಚನ್ನವೀರ ಕಣವಿ, ಸಂ.ಶಿ.ಭೂಸನೂರಮಠ, ಆರ್.ಸಿ.ಹಿರೇಮಠ, ಕೀರ್ತಿನಾಥ ಕುರ್ತಕೋಟಿ, ಗಿರಡ್ಡಿ ಗೋವಿಂದರಾಜ, ಸೋಮಶೇಖರ ಇಮ್ರಾಪುರ, ಜಿ.ಎಸ್. ಆಮೂರ ಸೇರಿದಂತೆ ಹಲವು ಹಿರಿಯ ಬರಹಗಾರರ ಸಾಧನೆ ಉತ್ತಮವಾಗಿದೆ ಎಂದರು.

ADVERTISEMENT

‘ಚಿತ್ರಕಲೆ, ಕ್ರೀಡೆ, ನಾಟಕ, ಸಹಕಾರ, ಶಿಕ್ಷಣ ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದಿಗ್ಗಜರನ್ನು ನಾವು ನೆನೆಯುವುದರ ಜೊತೆಗೆ ಇಂದಿನ ಮಕ್ಕಳಿಗೆ ಇವರೆಲ್ಲರನ್ನೂ ಪರಿಚಯಿಸಬೇಕಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಸೀನಪ್ಪ ಮಾತನಾಡಿ, ಕನ್ನಡ ಅಂದಾಜು 2 ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೇಳುತ್ತಾರೆ. ಆದರೆ, ವಾಸ್ತವವಾಗಿ 5 ಸಾವಿರ ವರ್ಷದಷ್ಟು ಹಳೆಯದಾಗಿದೆ ಎಂದು ಸಂಶೋದಕರು ಹೇಳುತ್ತಾರೆ. ಹೀಗಾಗಿ ಜಗತ್ತಿನ 7 ನೇ ಪ್ರಾಚೀನ ಭಾಷೆಯಾಗಿದೆ ಎಂದು ತಿಳಿಸಿದರು.

ಭಾಷೆ ಅಭಿವೃದ್ಧಿ ಕುರಿತು ವಿವಿಧ ಯೋಜನೆ ಅನುಷ್ಠಾನಗೊಳಿಸಬೇಕು. ಪಾಲಕರು ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಮಾಧ್ಯಮದ ಶಾಲೆಗಳಿಗೆ ಸೇರಿಸುವಂತೆ ಜಾಗೃತಿ ಮೂಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣದಿಂದಾಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಒಂದು ಬಾರಿ ಶಾಲೆಯನ್ನು ಮುಚ್ಚಿದರೆ ಪುನಃ ಅದನ್ನು ಸ್ಥಾಪನೆ ಮಾಡಬೇಕಾದರೆ ತುಂಬಾ ಕಷ್ಟವಾಗುತ್ತದೆ ಎಂದರು.

ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಮಾಲಾ, ಸದಸ್ಯರಾದ ಚಂದ್ರಕಲಾ ಮೂರ್ತಿ, ಸಾಗರಹಳ್ಳಿ ಶ್ರೀನಿವಾಸ್, ಹುರುಳುಗುರ್ಕಿ ಶಾಂತಕುಮಾರ್, ಮೌಸಿನ್‌ ತಾಜ್‌ ಸಜ್ಜದ್, ಮುನಿಯಪ್ಪ, ಲಕ್ಷ್ಮೀದೇವಮ್ಮ ತಿರುಮಳಪ್ಪ, ರವಿಪ್ರಕಾಶ್, ಅಮರನಾಥ್, ನರಸಿಂಹಪ್ಪ, ಬಾಲಗಂಗಾಧರ್, ಪ್ರೇಮಕುಮಾರಿ, ಮುನಿರತ್ನಮ್ಮ, ಗೌರಿ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.