ADVERTISEMENT

ಅಕ್ಕಿ ವಿತರಣೆಗೆ ಸಿದ್ಧತೆ

ಮಳೆ ಹಾನಿ: ಪರಿಹಾರಕ್ಕೆ ದೇಶಪಾಂಡೆ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 7:14 IST
Last Updated 5 ಜುಲೈ 2013, 7:14 IST

ಕಾರವಾರ: `ಮಳೆಯಿಂದ ಹಾನಿಗೀಡಾಗುವ ಆಸ್ತಿಪಾಸ್ತಿಗಳಿಗೆ ತಕ್ಷಣ ಪರಿಹಾರ ಒದಗಿಸಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸೂಚನೆ ನೀಡಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. `ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಸ್ತೆ, ಮನೆಗಳು ಸೇರಿದಂತೆ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗುತ್ತಿದೆ. ಆಸ್ತಿ ಪಾಸ್ತಿ ಹಾನಿಗಳಿಗೆ 24 ಗಂಟೆ ಒಳಗಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು.  ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ನೆರವು ಒದಗಿಸಬೇಕು' ಎಂದರು.

ಭಾಗ್ಯಜ್ಯೋತಿ ಮರು ಸಂಪರ್ಕ:  ಭಾಗ್ಯಜ್ಯೋತಿ ಯೋಜನೆಯಡಿ ಪ್ರಸ್ತುತ ಸಂಪರ್ಕ ಕಡಿತ ಮಾಡಲಾಗಿರುವ ವಿದ್ಯುತ್ ಸಂಪರ್ಕಗಳನ್ನು ಪುನರಾರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಇದುವರೆಗೆ ಎಷ್ಟು ಮನೆಗಳಿಗೆ ಸಂಪರ್ಕ ಮತ್ತೆ ಕಲ್ಪಿಸಲಾಗಿದೆ?  ಎಷ್ಟು ಬಾಕಿಯಿದೆ ಎಂಬ ಬಗ್ಗೆ ಆಯಾ ತಹಶೀಲ್ದಾರರು ಪರಿಶೀಲಿಸಿ ವರದಿ ಸಲ್ಲಿಸಲು ತಿಳಿಸಿದರು.

ಹಾಲು ಸಂಗ್ರಹ ಹೆಚ್ಚಳ: ಸರ್ಕಾರ ಪ್ರತಿ ಲೀಟರ್ ಹಾಲಿಗೆ ನಾಲ್ಕು ರೂಪಾಯಿ ಸಹಾಯಧನ ಒದಗಿಸುತ್ತಿದ್ದು, ಅದರ ಲಾಭ ಜಿಲ್ಲೆಯ ಹೆಚ್ಚಿನ ರೈತರಿಗೆ ಸಿಗುವಂತೆ ಯೋಜನೆ ರೂಪಿಸಬೇಕು. ಕೆಎಂಎಫ್ ಮೂಲಕ ರೈತರಿಂದ ಹಾಲು ಸಂಗ್ರಹ ಮಾರ್ಗಗಳನ್ನು ಹೆಚ್ಚಿಸಬೇಕು. ಈ ಕುರಿತು ಜಿಲ್ಲಾಧಿಕಾರಿ ಅವರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಯೋಜನೆ ರೂಪಿಸಲು ಸೂಚನೆ ನೀಡಿದರು.

ಅಕ್ಕಿ ವಿತರಣೆಗೆ ಸಿದ್ಧತೆ: `ಬಿಪಿಎಲ್ ಕಾರ್ಡ್‌ದಾರರಿಗೆ ಜುಲೈ10 ರಿಂದ ಕೆ.ಜಿ.ಗೆ ರೂ 1ನಂತೆ ಅಕ್ಕಿ ವಿತರಿಸಲು ಸಿದ್ಧತೆಗಳನ್ನು ನಾಲ್ಕು ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು. ಅಕ್ಕಿ ವಿತರಣೆ ಆರಂಭವಾದ ಮೇಲೆ ಗೊಂದಲಕ್ಕೆ ಆಸ್ಪದ ಇರಬಾರದು. ಜಿಲ್ಲೆಯಲ್ಲಿ ಪ್ರಸ್ತುತ 2,18,346 ಬಿಪಿಎಲ್ ಕಾರ್ಡದಾರರಿದ್ದಾರೆ. ಬಿಪಿಎಲ್ ಕಾರ್ಡಿಗಾಗಿ ಇನ್ನೂ 36 ಸಾವಿರ ಅರ್ಜಿಗಳು ಬಂದಿದ್ದು, ಅವುಗಳನ್ನು ಆದಷ್ಟು ಬೇಗನೇ ವಿಲೇವಾರಿ ಮಾಡಬೇಕು. ಅರ್ಹರಿಗೆ ಬಿಪಿಎಲ್ ಕಾರ್ಡ್ ದೊರೆಯುವಂತೆ ಎಚ್ಚರಿಕೆ ವಹಿಸಬೇಕು' ಎಂದು ಹೇಳಿದರು.

ಕಡಲ್ಕೊರೆತ ತಡೆಗೆ ಅನುದಾನ: ಕಡಲ್ಕೊರೆತ ತಡೆ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಜಿಲ್ಲೆಗೆ ಎರಡು ಕೋಟಿ ರೂಪಾಯಿ ಮಂಜೂರು ಮಾಡಿದೆ. ಸಮುದ್ರ ಕೊರೆತದಿಂದ ಹಾನಿಗೀಡಾಗಿರುವ ಕಡೆ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನ್ನು ತಕ್ಷಣ ಸಲ್ಲಿಸಲು ಸಚಿವರು ಸೂಚಿಸಿದರು.

ಯಂತ್ರೋಪಕರಣಗಳ ಬ್ಯಾಂಕ್: `ಪ್ರತಿ ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದ ತಕ್ಷಣ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಮೋಟಾರು ಹಾಗೂ ಹ್ಯಾಂಡ್ ಪಂಪ್‌ಗಳನ್ನು ಹೆಚ್ಚುವರಿಯಾಗಿ ಖರೀದಿಸಿ ಸಜ್ಜುಗೊಳಿಸಬೇಕು. ಪ್ರತಿ ತಾಲೂಕಿನಲ್ಲಿ ಕನಿಷ್ಠ 5 ಮೋಟಾರು ಹಾಗೂ 5 ಕೈಪಂಪ್‌ಗಳನ್ನು ಖರೀದಿಸಿ ಇಡಬೇಕು. ಹಾಳಾದ ಕಡೆ ತಕ್ಷಣ ಅದನ್ನು ಬದಲಾಯಿಸಲು ಇದರಿಂದ ಸಾಧ್ಯವಿದೆ' ಎಂದರು.

ಮರಳು ಸಾಗಣೆ ಪುನರಾರಂಭಿಸಲು ಠರಾವು: ಕಾಳಿ ನದಿಯಿಂದ ಗೋವಾ ರಾಜ್ಯಕ್ಕೆ ಕಪ್ಪು ಮರಳು ಸಾಗಣೆ ಪುನರಾರಂಭಿಸಲು ಅನುಮತಿ ನೀಡಲು ಕೋರಿ ಸಭೆಯಲ್ಲಿ ಠರಾವು ಅಂಗೀಕರಿಸಲಾಯಿತು. ಕಾಳಿ ನದಿಯಲ್ಲಿ ಮರಳು ಸಾಕಷ್ಟು  ಪ್ರಮಾಣದಲ್ಲಿದ್ದು, ಈ ಮರಳನ್ನು ಗೋವಾಕ್ಕೆ ಸಾಗಿಸಲು ಅನುಮತಿಯನ್ನು ಮತ್ತೆ ದೊರಕಿಸಿ ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ರಸ್ತೆಗಳು ಮೇಲ್ದರ್ಜೆಗೆ: ಜಿಲ್ಲೆಯಲ್ಲಿರುವ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ, ಜಿಲ್ಲಾ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳಾಗಿ, ಜಿಲ್ಲಾ ಪಂಚಾಯ್ತಿ ರಸ್ತೆಗಳನ್ನು ಜಿಲ್ಲಾ ರಸ್ತೆಗಳಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಗಳನ್ನು ಆದಷ್ಟು ಬೇಗನೇ ಸಲ್ಲಿಸಬೇಕು ಎಂದರು.

ಜಿಲ್ಲಾಧಿಕಾರಿ ಇಮ್‌ಕೊಂಗ್ಲಾ ಜಮೀರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಸುಬ್ರಾಯ ಕಾಮತ್, ಜಿ.ಪಂ. ಅಧ್ಯಕ್ಷ ಕೃಷ್ಣ ಗೌಡ, ಉಪಾಧ್ಯಕ್ಷ ಲಲಿತಾ ಪಟಗಾರ, ಹೆಚ್ಚುವರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ , ಎಸ್‌ಪಿ ಆರ್.ದಿಲೀಪ , ಶಾಸಕರಾದ ಸತೀಶ ಸೈಲ್, ಮಂಕಾಳು ವೈದ್ಯ, ಶಿವರಾಮ ಹೆಬ್ಬಾರ್, ಎಂಎಲ್‌ಸಿ ಘೋಟ್ನೇಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.