ADVERTISEMENT

ಅಕ್ರಮಕ್ಕೆ ಆಸ್ಪದ ನೀಡಬೇಡಿ

ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ವಿಶೇಷ ಸಭೆಯಲ್ಲಿ ರೂಪಾಲಿ ನಾಯ್ಕ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 9:30 IST
Last Updated 25 ಮೇ 2018, 9:30 IST

ಅಂಕೋಲಾ: ಕ್ಷೇತ್ರದಲ್ಲಿ ಈ ಹಿಂದಿನ ಜನಪ್ರತಿನಿಧಿಗಳಿಂದ ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಅಧಿಕಾರಿಗಳೇ ಸಹಕಾರ ನೀಡಿರುವುದು ಗೊತ್ತಾಗಿದೆ. ಇನ್ನು ಮುಂದೆ ಅಕ್ರಮಕ್ಕೆ ಆಸ್ಪದ ನೀಡದೇ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಗುರುವಾರ ಆಯೋಜಿಸಲಾದ ಪ್ರಗತಿ ಪರಿಶೀಲನಾ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

‘ಇನ್ನು ಮುಂದೆ ಕ್ಷೇತ್ರದಲ್ಲಿ ಯಾವುದೇ ಕಮಿಷನ್ ದಂಧೆ ನಡೆಯಲು ಆಸ್ಪದವಿಲ್ಲ. ನೀವು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಆಗ ನಿಮ್ಮೊಂದಿಗೆ ನಾನು ಎಂದು ಇರುತ್ತೇನೆ. ಚುನಾವಣೆ ಮುಗಿದಿದ್ದು, ಪಕ್ಷಾತೀತವಾಗಿ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಯಾವುದೇ ರಾಜಕೀಯ ಉದ್ದೇಶಗಳಿಂದ ಜನರಿಗೆ ತೊಂದರೆಯಾಗಬಾರದು’ ಎಂದು ಸೂಚಿಸಿದರು.

ADVERTISEMENT

ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಔಷಧಿ, ಚರ್ಮ, ಕಣ್ಣಿನ ವೈದ್ಯರು, ಮಕ್ಕಳ ತಜ್ಞರು ಬೇಕಾಗಿದ್ದಾರೆ. ಡಯಾಲಿಸಿಸ್ ಕೇಂದ್ರ ಕೂಡ ಆರಂಭವಾಗಿದ್ದು ವಿದ್ಯುತ್ ಸಮಸ್ಯೆ ಆಗಾಗ ಎದುರಾಗುತ್ತದೆ. 62 ಕೆ.ವಿ ಜನರೇಟರ್ ಅವಶ್ಯಕತೆ ಇದೆ. ಇದರ ಬಗ್ಗೆ ಈಗಾಗಲೇ  ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹೇಂದ್ರ ನಾಯ್ಕ ತಿಳಿಸಿದರು.

ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಕಾರವಾರದಿಂದಲೂ ರೋಗಿಗಳು ಬರುತ್ತಾರೆ. ಇಲ್ಲಿರುವ ಎರಡು ಆಂಬುಲೆನ್ಸ್‌ಗಳನ್ನು ಆಗಾಗ ಕಾರವಾರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಈ ಆಸ್ಪತ್ರೆಗೆ ತೊಂದರೆಯಾಗುತ್ತದೆ ಎಂದು ಅವರು ಗಮನಕ್ಕೆ ತಂದರು.

‘ನಿಫಾ ವೈರಸ್ ನಮ್ಮ ಜಿಲ್ಲೆಯಲ್ಲಿ ಹರಡದಂತೆ ತಡೆಗಟ್ಟುವ ಕ್ರಮಗಳನ್ನು ಜಿಲ್ಲಾ ವೈದ್ಯಾಧಿಕಾರಿ ಹಾಗೂ ತಾಲ್ಲೂಕು ಆಸ್ಪತ್ರೆಗಳ ವೈದ್ಯರು ಕ್ರಮ ಕೈಗೊಳ್ಳಬೇಕು’ ಎಂದು ರೂಪಾಲಿ ಹೇಳಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಟಿ.ಗಾಂವಕರ, ಉಪಾಧ್ಯಕ್ಷೆ ತುಳಸಿ ಸುಕ್ರು ಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯ ಜಗದೀಶ ಜಿ ನಾಯಕ, ಉಷಾ ಉದಯ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ತಹಶೀಲ್ದಾರ ಅಶೋಕ ಶಿಗ್ಗಾಂವಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕರೀಮ್ ಅಸದಿ, ಸದಸ್ಯ ಸಂಜೀವ ಕುಚನಾಡ ಇದ್ದರು. ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕರಾದ ಗಿರೀಶ ನಾಯಕ ಸ್ವಾಗತಿಸಿ ವಂದಿಸಿದರು.

‘ಅವೈಜ್ಞಾನಿಕ ಸೇತುವೆ’

ಡೊಂಗ್ರಿಯಲ್ಲಿ ರಸ್ತೆ ಮತ್ತು ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಇದು ಹಿಂದಿನ ಜನಪ್ರತಿನಿಧಿಗಳು ಮಾಡಿದ ಅಭಿವೃದ್ಧಿಯ ಒಂದು ನಿದರ್ಶನ. ಇದೇ ರೀತಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆಗಳ ಸ್ಥಿತಿಯೂ ಇದೆ. ಅವುಗಳನ್ನು ಈಗ ಸರಿಪಡಿಸಬೇಕಾಗಿದೆ ಎಂದು ರೂಪಾಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.