ADVERTISEMENT

ಅಡ್ವಾಣಿ ಸ್ವಾಗತಕ್ಕೆ ಮುರ್ಡೇಶ್ವರ ಸಜ್ಜು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 10:10 IST
Last Updated 28 ಅಕ್ಟೋಬರ್ 2011, 10:10 IST

ಭಟ್ಕಳ: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರ ಜನ ಚೇತನ ಯಾತ್ರೆ ಉಡುಪಿಯಿಂದ ಭಟ್ಕಳಕ್ಕೆ ಅ. 31ರಂದು ರಾತ್ರಿ 7ಕ್ಕೆ ಆಗಮಿಸಲಿದ್ದು, ರಾತ್ರಿ ಅಡ್ವಾಣಿ ಮುರ್ಡೇಶ್ವರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಟ್ಕಳ ಹಾಗೂ ಮುರ್ಡೇಶ್ವರದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಪೊಲೀಸ್ ಇಲಾಖೆ ಹಾಗೂ ತಾಲ್ಲೂಕಿನ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ನಂತರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಭಟ್ಕಳ ಒಂದು ಸೂಕ್ಷ್ಮ ಪ್ರದೇಶ ವಾಗಿದ್ದು ಅಡ್ವಾಣಿಯವರ ಯಾತ್ರೆಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ಯಾವುದೇ ಘಟನೆ ಗಳಿಗೆ ಆಸ್ಪದವಾಗದಂತೆ, ಶಾಂತಿ ಸುವ್ಯವಸ್ಥೆ ಕಾಪಾ ಡಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಉಡುಪಿಯಿಂದ ಬರುವ ಅಡ್ವಾಣಿ ಅವರ ಜನ ಚೇತನ ಯಾತ್ರೆಯನ್ನು ಭಟ್ಕಳದ ಗಡಿ ಪ್ರದೇಶ ಗೊರಟೆಯಲ್ಲಿ ಬೈಕ್ ಜಾಥಾದ ಮೂಲಕ ಅದ್ದೂರಿಯಾಗಿ ಸ್ವಾಗತಿಸಲು ಉದ್ದೇಶಿಸಿದ್ದು, ಇನ್ನೂ ಅಂತಿಮವಾಗಿಲ್ಲ ಎಂದು ಬಿಜೆಪಿ ಮುಖಂಡ ಹಾಗೂ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ವಿನೋದ ಪ್ರಭು ತಿಳಿಸಿದರು.

ಮುರ್ಡೇಶ್ವರದಲ್ಲಿ ಅ.31ರಂದು ರಾತ್ರಿ ವಾಸ್ತವ್ಯ ಮಾಡುವ ಅಡ್ವಾಣಿ ಮಾರನೇ ದಿನ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಯಾತ್ರೆ ಮುಂದುವರಿಸಲಿದ್ದಾರೆ. ನ. 1ರಂದು ಕುಮಟಾದ ಮಣಕಿ ಮೈದಾನದಲ್ಲಿ ಯಾತ್ರೆಯ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಅವರು ಹೇಳಿದರು.

ಶಾಸಕ ಜೆ.ಡಿ.ನಾಯ್ಕ, ಡಿಎಸ್‌ಪಿ ಎಂ.ನಾರಾ ಯಣ, ಸಹಾಯಕ ಕಮೀಷನರ್ ಅಶೋಕ ನಾಯ್ಕ, ಶಿರಸ್ತೆ ದಾರ್ ಜಿ.ಎಂ.ಬೋರ್ಕರ್, ಮುರ್ಡೇಶ್ವರ ದೇವಸ್ಥಾನದ ಟ್ರಸ್ಟಿ ಶ್ರೀಪಾದ ಕಾಮತ್, ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಅಡ್ವಾಣಿ ಅವರು ಮುರ್ಡೇಶ್ವರದ ಪ್ರತಿಷ್ಠಿತ ಆರ್‌ಎನ್‌ಎಸ್ ಗೆಸ್ಟಹೌಸ್‌ನಲ್ಲಿ ಅ.31ರ ರಾತ್ರಿ ವಾಸ್ತವ್ಯ ಮಾಡಲಿದ್ದಾರೆ.

ಅವರಿಗಾಗಿಯೇ ವಿಶೇಷ ಕೋಣೆಯೊಂದನ್ನು ಸಜ್ಜುಗೊಳಿಸಲಾಗಿದ್ದು,ಅವರಿಗೆ ಇಷ್ಟವಾದ ಊಟ ತಿಂಡಿಯ ವ್ಯವಸ್ಥೆ ನೋಡಿಕೊಳ್ಳಲು ಐದಾರು ಜನ ಬಾಣಸಿಗರ ಒಂದು ತಂಡವನ್ನೇ ರಚಿಸಲಾಗಿದೆ. ಜನಚೇತನ ಯಾತ್ರೆಯೊಂದಿಗೆ ಬರುವ ಪಕ್ಷದ ಪ್ರಮುಖರ ವಾಸ್ತವ್ಯಕ್ಕೂ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ.

ಬಂದೋಬಸ್ತ್‌ಗಾಗಿ ನಿಯೋಜಿತರಾಗಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ಸಾವಿರಾರು ಪೊಲೀಸ್ ಸಿಬ್ಬಂದಿಗೂ ಪಕ್ಷದ ವತಿಯಿಂದ ಊಟ ಹಾಗೂ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಯಾತ್ರೆಯ ಉಸ್ತುವಾರಿ ನೋಡಿ ಕೊಳ್ಳುತ್ತಿರುವ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.