ADVERTISEMENT

ಅಪಾಯಕ್ಕೆ ಆಹ್ವಾನ ನೀಡುವ ಚಂಡಿಕಾ ಹೊಳೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 10:00 IST
Last Updated 2 ಫೆಬ್ರುವರಿ 2011, 10:00 IST

ಕುಮಟಾ : ಇಲ್ಲಿಯ ಕತಗಾಲ ಬಳಿ ಕುಮಟಾ- ಶಿರಸಿ ರಸ್ತೆ ಅಂಚಿಗೆ ಯಾವುದೇ ತಡೆಗೋಡೆ ಇಲ್ಲದಿರುವುದರಿಂದ ಪಕ್ಕದ ಚಂಡಿಕಾ ಹೊಳೆ ಸದಾ ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಕುಮಟಾದಿಂದ ಶಿರಸಿ ರಸ್ತೆಯಲ್ಲಿ ಸುಮಾರು 12 ಕಿ.ಮೀ. ದೂರವಿರುವ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಕತಗಾಲ ಬಳಿ ಅಪಾಯಕಾರಿ ತಿರುವಿನಿಂದ ಕೂಡಿರುವ ರಸ್ತೆ ಪಕ್ಕವೇ ಯಾಣದಿಂದ ಹುಟ್ಟುವ ಚಂಡಿಕಾ ಹೊಳೆ ಅಂಕುಡೊಂಕಾಗಿ ಹರಿಯುತ್ತದೆ.

ಹೊಸತಾಗಿ ಈ ರಸ್ತೆಯಲ್ಲಿ ವಾಹನ ಚಲಾಯಿಸುವವರು ಮಳೆಗಾಲದಲ್ಲಿ ಹಾಗೂ ರಾತ್ರಿ ಹೊತ್ತು ಅಪಾಯಕಾರಿ ತಿರುವಿನಲ್ಲಿ ನೇರವಾಗಿ ಚಂಡಿಕಾ ಹೊಳೆಯಲ್ಲಿ ಬೀಳುವ ಸಾಧ್ಯತೆ ಹೆಚ್ಚಾಗಿದೆ.  ಐದಾರು ವರ್ಷಗಳ ಹಿಂದೆ  ಪ್ರವಾಸಕ್ಕೆ ಬಂದಿದ್ದ ಕಾಲೇಜು ವಿದ್ಯಾರ್ಥಿಗಳ ಟಾಟಾ ಸುಮೋ ವಾಹನ ಮಳೆಗಾಲದಲ್ಲಿ ಮಧ್ಯರಾತ್ರಿ ಹೊತ್ತು ತುಂಬಿ ಹರಿಯುವ ಚಂಡಿಕಾ ಹೊಳೆಗೆ ಬಿದ್ದಿತು. ಹೊಳೆಯಲ್ಲಿ ಗಿಡಗಂಟಿಗಳಿದ್ದುದರಿಂದ ವಿದ್ಯಾರ್ಥಿಗಳಿದ್ದ ವಾಹನದಿಂದ ಕೊಚ್ಚಿಕೊಂಡು ಹೋಗದೆ ಸಿಕ್ಕಿಹಾಕಿಕೊಂಡಿತು.

ಆಗ ಸುತ್ತಲಿನವರು ಬಂದು ಅವರನ್ನು ಕಾಪಾಡಿದರು. ಈ ಘಟನೆ ನಡೆದ ನಂತರವೂ ಸಂಬಂಧಪಟ್ಟವರು ಎಚ್ಚತ್ತುಕೊಂಡು ರಸ್ತೆಯಂಚಿಗೆ ಇನ್ನೂ ತಡೆಗೋಡೆ ನಿರ್ಮಾಣ ಕಾರ್ಯ ಕೈಕೊಂಡಿಲ್ಲ.ಇದರ ನಂತರ ಇದೇ ರಸ್ತೆಯಲ್ಲಿ ಮುಂದೆ ಒಂದು ಕಿ.ಮೀ.  ದೂರ ರಾತ್ರಿ ಹೊತ್ತು ಲಾರಿಯೊಂದು ಸುಮಾರು 50 ಅಡಿ ಆಳಕ್ಕೆ ರಸ್ತೆ ಪಕ್ಕ ಹರಿಯುವ ಚಂಡಿಕಾ ಹೊಳೆಗೆ ಬಿತ್ತು. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಲಾರಿ ಕ್ಲೀನರ್ ಹೊಳೆಯಲ್ಲಿದ್ದ ಗಿಡಗಂಟಿ ಹಿಡಿದುಕೊಂಡು ಬೊಬ್ಬೆ ಹಾಕಿದಾಗ ಅಕ್ಕ-ಪಕ್ಕದ ಮನೆಯವರು ಬಂದು ಕಾಪಾಡಿದರು.
ಈ ಘಟನೆ ನಂತರ ಲೋಕೋಪಯೋಗಿ ಇಲಾಖೆಯವರು ರಸ್ತೆಯಂಚಿಗೆ ತಡೆಗೋಡೆ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.