ಸಿದ್ದಾಪುರ: `ಇಂಧನದ ವಿಷಯದಲ್ಲಿ ನಾವು ಸ್ವಾವಲಂಬಿಯಾಗಲು ಜೈವಿಕ ಇಂಧನದ ಸಸ್ಯಗಳನ್ನು ಬೆಳೆಸಬೇಕು. ಕೃಷಿಯಲ್ಲಿ ಉಪಯೋಗಿಸುವ ಯಂತ್ರಗಳಿಗೆ ಬೇಕಾದ ಇಂಧನವನ್ನು ಜೈವಿಕ ಸಸ್ಯಗಳ ಮೂಲಕ ಪಡೆಯಲು ಪ್ರಯತ್ನ ಮಾಡಬೇಕು~ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಿ.ಎಸ್.ಹೆಗಡೆ ಹೇಳಿದರು.
ಜೈವಿಕ ಇಂಧನದ ಬಳಕೆ ಮತ್ತು ಉತ್ಪಾದನೆ ಕುರಿತಂತೆ ಬಿಸ್ವಾ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಏರ್ಪಡಿದ್ದ ಜೈವಿಕ ಇಂಧನ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಇಂಧನದ ವಿಷಯದಲ್ಲಿ ನಾವು ಸಂಪೂರ್ಣ ಪರಾವಲಂಬಿಯಾಗಿದ್ದೇವೆ. ನಮ್ಮ ದೇಶದಲ್ಲಿ ಕೇವಲ ಶೇ 20ರಷ್ಟು ಇಂಧನ ಮಾತ್ರ ದೊರೆಯುತ್ತಿದ್ದು, ಶೇ 80ರಷ್ಟು ಇಂಧನಕ್ಕೆ ಹೊರದೇಶಗಳನ್ನು ಅವಲಂಬಿಸಬೇಕಾಗಿದೆ~ ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಶಿರಸಿಯ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಪ್ರಾಧ್ಯಾಪಕ ಡಾ.ಪಿ ರಮಣ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಆರ್‌ಎಫ್‌ಒ ಆರ್.ವಿ.ಹೆಗಡೆ ಜೈವಿಕ ಇಂಧನದ ಕುರಿತು ಮಾಹಿತಿ ನೀಡಿದರು.
ತಾ.ಪಂ. ಉಪಾಧ್ಯಕ್ಷ ನೀಲಕಂಠ ಗೌಡರ್ ಮಾತನಾಡಿ, `ನಮ್ಮ ಹಳ್ಳಿಗಳ ಪ್ರದೇಶದಲ್ಲಿಯೂ ಈಗ ಅರಣ್ಯ ಕಡಿಮೆಯಾಗಿದೆ. ಅರಣ್ಯ ಸಂಪತ್ತನ್ನು ಉರವಲಾಗಿ ಉಪಯೋಗ ಮಾಡುತ್ತಿದ್ದೇವೆ. ಆದ್ದರಿಂದ ಹೊಂಗೆ ಮರದಂತಹ ಸಸ್ಯಗಳಿಂದ ಜೈವಿಕ ಇಂಧನ ಪಡೆಯುವುದಕ್ಕೆ ಪ್ರಾಮುಖ್ಯ ನೀಡಬೇಕು~ ಎಂದರು.
ತಾ.ಪಂ.ಅಧ್ಯಕ್ಷೆ ಮಹಾದೇವಿ ರಾಮ ಗೌಡ ಅಧ್ಯಕ್ಷತೆ ವಹಿಸಿದ್ದರು.ಎಸ್.ಜಿ.ಹೆಗಡೆ ಸ್ವಾಗತಿಸಿದರು. ಗುರುರಾಜ ಶಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಭಟ್ಟ ವಂದಿಸಿದರು. ನಾಗಭೂಷಣ ಕೊಂಡ್ಲಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.