ADVERTISEMENT

ಈದ್ಗಾ ಕಟ್ಟಡ ಸ್ಥಳಾಂತರಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 7:00 IST
Last Updated 17 ಸೆಪ್ಟೆಂಬರ್ 2011, 7:00 IST

ಹಳಿಯಾಳ: ಪಟ್ಟಣದ ಮರಡಿಯಲ್ಲಿರುವ ಈದ್ಗಾ ಕಟ್ಟಡ ಸ್ಥಳಾಂತರಿಸಿ 8 ಮೀಟರ್ ಹಿಂದಕ್ಕೆ ಪುನರ್ ನಿರ್ಮಾಣ ಮಾಡಲು ಪಟ್ಟಣ ಪಂಚಾಯಿತಿಯಿಂದ ಅನುಮತಿ ನೀಡಲಾಯಿತು.

ಅಂಜುಮನ್ ಇಸ್ಲಾಂ ದಿ.ಇಕ್ಬಾಲ್ ಎಜುಕೇಶನ್ ಸೊಸೈಟಿಯಿಂದ ಹಳಿಯಾಳ ಪಟ್ಟಣ ಪಂಚಾಯಿತಿಗೆ ಕಳೆದ ಹಲವಾರು ವರ್ಷಗಳಿಂದ ಪಟ್ಟಣದ ಮರಡಿಯಲ್ಲಿರುವ ಈದ್ಗಾ ಕಟ್ಟಡ ರಂಜಾನ್ ಹಾಗೂ ಬಕ್ರೀದ್ ಹಬ್ಬಗಳಂದು ಮುಸ್ಲಿಂ ಬಾಂಧವರು ನಮಾಜ್ ಮಾಡಲು ತೆರಳುತ್ತಾರೆ. ಆದರೆ ಈಗಾಗಲೇ ನಿರ್ಮಿಸಿದಂತಹ ಈದ್ಗಾ ಕಟ್ಟಡದ ಮುಂಭಾಗದಲ್ಲಿ ನಮಾಜ್ ಮಾಡಲು ಜಾಗದ ಅಭಾವ ಉಂಟಾಗಿ ತೀರಾ ತೊಂದರೆಯಾಗುತ್ತಿದೆ. ಈದ್ಗಾದ ಪಶ್ಚಿಮ ದಿಕ್ಕಿಗೆ ಇರುವ ಪಟ್ಟಣ ಪಂಚಾಯಿತಿಯ 8 ಮೀಟರ್ ಜಾಗವನ್ನು ತಮಗೆ ನೂತನ ಈದ್ಗಾ ಕಟ್ಟಡ ನಿರ್ಮಾಣ ಮಾಡಲು ಮಂಜೂರಾತಿ ಮಾಡಬೇಕೆಂದು ಪಟ್ಟಣ ಪಂಚಾಯಿತಿಗೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಪಂಚಾಯಿತಿಯ ಆಡಳಿತ ಮಂಡಳಿ ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಶುಕ್ರವಾರದಂದು ಪಟ್ಟಣ ಪಂಚಾಯಿತಿಯ ಸಭಾ ಭವನದಲ್ಲಿ ಪಕ್ಷಾತೀತವಾಗಿ ಸರ್ವ ಮುಖಂಡರ ಸಭೆಯನ್ನು ನಡೆಸಿದರು.  

ಸಭೆಯಲ್ಲಿ ಕೆಲವು ಮುಖಂಡರು ಮರಡಿ ಈದ್ಗಾದ ಕಟ್ಟಡದ ಸಮೀಪದಲ್ಲಿಯೇ ಹಿಂದೂ ಧರ್ಮೀಯರ ಬನ್ನಿಕಟ್ಟೆ ಇರುತ್ತದೆ. ಪ್ರತಿ ವರ್ಷ ದಸರಾ ನವಮಿಯಂದು ಬನ್ನಿ ಕಟ್ಟೆಯ ಬಳಿ ಬನ್ನಿ ಮುಡಿಯಲು ಸಹ ಹಿಂದೂ ಬಾಂಧವರು ತೆರಳುತ್ತಾರೆ. ಅದರ ಪಕ್ಕದಲ್ಲಿಯೇ ಅಯ್ಯಪ್ಪ ಸ್ವಾಮಿಯ ದೇವಾಲಯವೂ ಇರುತ್ತದೆ.

ಪಟ್ಟಣ ಪಂಚಾಯಿತಿ  ಈ ಬಗ್ಗೆ ಸೂಕ್ತ ಸಮಾಲೋಚನೆ ನಡೆಸಿ ಕೋಮು ಸೌಹಾರ್ದತೆಯಿಂದ ಇರುವ ನಿಟ್ಟಿನಲ್ಲಿ ಎರಡೂ ಧರ್ಮೀಯರಿಗೆ ಉಪಯೋಗವಾಗುವಂತೆ ಈದ್ಗಾ ಕಟ್ಟಡ ಹಾಗೂ ಬನ್ನಿ ಕಟ್ಟೆಯನ್ನು ನಿರ್ಮಿಸಲು ಅನುಮತಿ ನೀಡಿರಿ ಎಂದರು.

ಶಾಸಕ ಸುನೀಲ ಹೆಗಡೆ ಮಾತನಾಡಿ ಮುಸ್ಲಿಂ ಬಾಂಧವರು  ಈಗಾಗಲೇ ಮರಡಿ ಬಳಿ ಇದ್ದಂತಹ ಈದ್ಗಾ ಕಟ್ಟಡವನ್ನು ಸ್ಥಳಾಂತರಿಸಲು ಉದ್ದೇಶಿಸಿದರೆ ಸ್ಥಳೀಯ ದೇಶಪಾಂಡೆ ರುಡ್‌ಸೆಟ್ ಬಳಿ ಇರುವ ತಮ್ಮ ಸ್ವಂತ ನಿವೇಶನದ ಹತ್ತು ಗುಂಟೆ ಜಮೀನನ್ನು ಈದ್ಗಾ ಕಟ್ಟಡ ನಿರ್ಮಾಣ ಮಾಡಲು ನೀಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್. ಘೋಟ್ನೇಕರ ಮಾತನಾಡಿ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯದಂತೆ ಈದ್ಗಾ ಕಟ್ಟಡ ಇದ್ದ ಜಾಗೆಯಿಂದ 8 ಮೀಟರ್ ಹಿಂದಕ್ಕೆ ಸ್ಥಳಾಂತರಿಸಿ ನೂತನ ಈದ್ಗಾ ಕಟ್ಟಡ ನಿರ್ಮಾಣ ಮಾಡಲು ಪಟ್ಟಣ ಪಂಚಾಯಿತಿಯಿಂದ ಸಹಕಾರ ಇರುತ್ತದೆ. ಆದರೆ ಪಟ್ಟಣ ಪಂಚಾಯಿತಿಯಲ್ಲಿರುವ ಜಾಗೆಯನ್ನು ಯಾವುದೇ ಕಾರಣಕ್ಕೂ ಯಾವುದೇ ಧರ್ಮದ ಹೆಸರಿನಲ್ಲಿ ಮಾಡಲಾಗುವುದಿಲ್ಲ ಅದು ಪಂಚಾಯಿತಿಯ ಹೆಸರಿನಲ್ಲಿರುತ್ತದೆ. ಎಲ್ಲರೂ ಕೋಮು ಸೌಹಾರ್ದತೆಯಿಂದ ಇರೋಣ ಎಂದರು.

ಸಭೆಯಲ್ಲಿ ಪ.ಪಂ ಅಧ್ಯಕ್ಷೆ ಭಾರತಿ ಗೋಂಧಳಿ. ಉಪಾಧ್ಯಕ್ಷ ಸಂತಾನ ಸಾವಂತ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತ ಹೂಲಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ವ್ಹಿ. ಡಿ. ಹೆಗಡೆ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಲಿಯಾಖತಅಲಿ ದಲಾಲ, ತಹಶೀಲ್ದಾರ ಅಜೀಜ ಆರ್.ದೇಸಾಯಿ, ಸಿ.ಪಿ.ಐ ಉಮೇಶ ಶೇಟ್, ಮುಖ್ಯಾಧಿಕಾರಿ ಮನ್ಸೂರಲಿ, ಮುಖಂಡರಾದ ಮಂಗೇಶ ದೇಶಪಾಂಡೆ , ರಾಜು ಧೂಳಿ, ಪ್ರಸಾದ ಹುಣ್ಸವಾಡಕರ, ದತ್ತು ಪಾಟೀಲ, ಗುಲಾಭಷಾ ಲತೀಫನವರ , ಎ.ಪಿ. ಮುಜಾವರ, ಮುಗದ ಖಯಾಮ್, ಯು. ಬಿ. ಬೋಬಾಟೆ, ಜಂಗೂಬಾಯಿ ಮತ್ತಿತರ ಎಲ್ಲ ಧರ್ಮ್ದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.