ADVERTISEMENT

ಪರಿಶಿಷ್ಟ ಜಾತಿ ಜನರ ಮಾಹಿತಿ ಸಂಗ್ರಹ | 12 ದಿನ: ಶೇ 89ರಷ್ಟು ಸಮೀಕ್ಷೆ ಪೂರ್ಣ

ಗಣಪತಿ ಹೆಗಡೆ
Published 17 ಮೇ 2025, 5:30 IST
Last Updated 17 ಮೇ 2025, 5:30 IST
ಹಳಿಯಾಳದ ತೇರಗಾಂವ ಗ್ರಾಮದಲ್ಲಿ ಗಣತಿದಾರರು ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದರು
ಹಳಿಯಾಳದ ತೇರಗಾಂವ ಗ್ರಾಮದಲ್ಲಿ ಗಣತಿದಾರರು ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದರು   

ಕಾರವಾರ: ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಪರಿಶಿಷ್ಟ ಜಾತಿಯಲ್ಲಿನ ಒಳ ಪಂಗಡಗಳ ಜನಸಂಖ್ಯೆ ಮತ್ತು ಸ್ಥಿತಿಗತಿ ಅರಿಯಲು ನಡೆಸುತ್ತಿರುವ ಸಮೀಕ್ಷೆಯು 12 ದಿನಗಳಲ್ಲಿ ಜಿಲ್ಲೆಯಲ್ಲಿ ಶೇ 89ರಷ್ಟು ಪೂರ್ಣಗೊಂಡಿದೆ.

ಮೇ5 ರಿಂದ 28ರವರೆಗೆ ಜಿಲ್ಲೆಯಾದ್ಯಂತ ಪರಿಶಿಷ್ಟ ಜಾತಿ ಜನರ ಸಮೀಕ್ಷೆ ನಡೆಸಲಾಗುತ್ತಿದೆ. 17ರವರೆಗೆ ಮನೆ ಮನೆ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿತ್ತಾದರೂ ಅವಧಿ ಕಡಿಮೆಯಾದ ಕಾರಣದಿಂದ 25ರವರೆಗೆ ವಿಸ್ತರಿಸಲಾಗಿದೆ. ಈವರೆಗೆ 24,395 ‍ಪರಿಶಿಷ್ಟ ಜಾತಿ ಕುಟುಂಬಗಳು ಸೇರಿದಂತೆ 2.86 ಲಕ್ಷ ಮನೆಗಳಿಗೆ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡ ಗಣತಿದಾರರು ಭೇಟಿ ನೀಡಿದ್ದಾರೆ.

‘2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 26,617 ಪರಿಶಿಷ್ಟ ಜಾತಿಯ ಕುಟುಂಬಗಳಿದ್ದವು. ಕಳೆದೊಂದು ದಶಕದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಏರಿಕೆಯಾಗಿದೆ. 12 ದಿನಗಳಲ್ಲಿ (ಮೇ 15ರ ರಾತ್ರಿವರೆಗೆ) ಶೇ 88.26ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. 2,222 ಪರಿಶಿಷ್ಟ ಜಾತಿ ಕುಟುಂಬಗಳು ಮತ್ತು 35,872 ಪರಿಶಿಷ್ಟರಲ್ಲದ ಕುಟುಂಬಗಳ ಮನೆಗಳ ಸಮೀಕ್ಷೆ ಬಾಕಿ ಉಳಿದಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಮೇ 25ರವರೆಗೆ ಮನೆ ಮನೆಗೆ ಭೇಟಿ ಮೂಲಕ ಸಮೀಕ್ಷೆ ನಡೆಸಲಾಗುತ್ತದೆ. ಅದಾದ ಬಳಿಕ ಮೂರು ದಿನ, ಅಂದರೆ ಮೇ 26ರಿಂದ 28ರವರೆಗೆ ಆಯಾ ಮತಗಟ್ಟೆ ಕೇಂದ್ರಗಳಲ್ಲಿ ಗಣತಿದಾರರು ಲಭ್ಯ ಇರಲಿದ್ದು, ಪರಿಶಿಷ್ಟರ ಮಾಹಿತಿ ಸಂಗ್ರಹಿಸುವರು. ಸಮೀಕ್ಷೆಯಲ್ಲಿ ಬಿಟ್ಟುಹೋದ ಕುಟುಂಬಗಳ ಸದಸ್ಯರು ನೇರವಾಗಿ ಗಣತಿದಾರರನ್ನು ಭೇಟಿಯಾಗಿ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಕೆ.ಉಮೇಶ್ ತಿಳಿಸಿದರು.

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಶಿಫಾರಸು ಸಹಿತ ವರದಿ ಸಲ್ಲಿಕೆಗೆ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗ ರಚಿಸಿದ್ದು, ಆಯೋಗದ ವರದಿ ಸಲ್ಲಿಕೆಗೆ ಪೂರಕ ಅಂಶಗಳನ್ನು ಒದಗಿಸಲು ಸಮೀಕ್ಷೆ ನಡೆಯುತ್ತಿದೆ.

ಸುತ್ತಾಡಿ ಸುಸ್ತಾದ ಗಣತಿದಾರರು

‘ಮತದಾರರ ಪಟ್ಟಿ ನೀಡಿ ಅದರ ಪ್ರಕಾರ ಸಮೀಕ್ಷೆ ನಡೆಸಲು ಸೂಚಿಸಿದ್ದರು. ಆಯಾ ವ್ಯಾಪ್ತಿಯ ಮತಗಟ್ಟೆ ಬಿಟ್ಟು ದೂರದ ಪ್ರದೇಶಗಳನ್ನೂ ನೀಡಿದ್ದರಿಂದ ಮತದಾರರ ಮನೆ ಹುಡುಕಾಡಲು ಸಮಸ್ಯೆ ಎದುರಿಸಬೇಕಾಯಿತು. ಹಳೆಯ ಮತದಾರರ ಪಟ್ಟಿ ನೀಡಿದ್ದು ಅದರಲ್ಲಿನ ಹಲವರು ಆಯಾ ಪ್ರದೇಶಗಳಲ್ಲಿಯೇ ಇರಲಿಲ್ಲ’ ಎಂದು ಗಣತಿದಾರರೊಬ್ಬರು ತಾವು ಎದುರಿಸಿದ ಸಮಸ್ಯೆ ಹೇಳಿಕೊಂಡರು. ‘ಸಮೀಕ್ಷೆಯ ಮಾಹಿತಿ ದಾಖಲಿಸಲು ನೀಡಲಾದ ಮೊಬೈಲ್ ಫೋನ್‌ ಆ್ಯಪ್ ಆರಂಭದ ಒಂದೆರಡು ದಿನ ಕೆಲಸವನ್ನೇ ನಿರ್ವಹಿಸಲಿಲ್ಲ. ಇದರಿಂದ ಮಾಹಿತಿ ದಾಖಲಿಸಲು ತೊಂದರೆಯಾಯಿತು. ಸಮೀಕ್ಷೆ ವೇಳೆ ಹಲವರು ಸರಿಯಾದ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದರು. ಕೆಲವರು ಮನೆಯಲ್ಲೇ ಇರುತ್ತಿರಲಿಲ್ಲ. ಪುನಃ ಅಂತಹ ಮನೆಗೆ ಮಾಹಿತಿಗಾಗಿ ಎರಡು ಮೂರು ದಿನ ಸುತ್ತಾಡಬೇಕಾಗಿತ್ತು’ ಎಂದು ಅಳಲು ತೋಡಿಕೊಂಡರು.

ಸಹಾಯವಾಣಿ ಆರಂಭ
‘ಗಣತಿದಾರರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗಳು ತಮ್ಮ ಆಧಾರ್‌ ಕಾರ್ಡ್ ಪಡಿತರ ಚೀಟಿ ಮೊಬೈಲ್ ಫೋನ್‌ ಸಂಖ್ಯೆ ನೀಡಿ ಗಣತಿ ಕಾರ್ಯಕ್ಕೆ ಸಹಕರಿಸಬೇಕು. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದ್ದು; 08382 229857 9483511015 ಅಥವಾ ರಾಜ್ಯ ಮಟ್ಟದ ಸಹಾಯವಾಣಿ 080 22634300  ಸಂಪರ್ಕಿಸಬಹುದು’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.