ADVERTISEMENT

ಕಂದಾಯ ಇಲಾಖೆ ಆವರಣದಲ್ಲಿ ಇಂಗುಗುಂಡಿ

ಸಂಧ್ಯಾ ಹೆಗಡೆ
Published 3 ಜುಲೈ 2017, 5:50 IST
Last Updated 3 ಜುಲೈ 2017, 5:50 IST
ಶಿರಸಿಯ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಮಳೆನೀರು ಸಂಗ್ರಹ ಟ್ಯಾಂಕ್
ಶಿರಸಿಯ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಮಳೆನೀರು ಸಂಗ್ರಹ ಟ್ಯಾಂಕ್   

ಶಿರಸಿ: ತಾಲ್ಲೂಕಿನಲ್ಲಿ ನಿರಂತರ ಎರಡು ವರ್ಷ ಬರ ಪರಿಸ್ಥಿತಿ ಎದುರಿಸಿರುವ ಕಂದಾಯ ಇಲಾಖೆ ಅಧಿಕಾರಿಗಳು ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಯಾಗಿ ಇಂಗುಗುಂಡಿ ನಿರ್ಮಾಣ, ಮಳೆ ನೀರು ಸಂಗ್ರಹಕ್ಕೆ ಮುಂದಾಗಿದ್ದಾರೆ.

ನಗರದ ಶಿರಸಿ– ಯಲ್ಲಾಪುರ ರಸ್ತೆ ಪಕ್ಕದಲ್ಲಿರುವ ಮಿನಿ ವಿಧಾನಸೌಧದ ಪಕ್ಕದಲ್ಲಿ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸುವ ಬೃಹತ್ ಇಂಗುಗುಂಡಿ ರಚಿಸಲಾಗಿದೆ. 100X100 ಸುತ್ತಳತೆಯ ಈ ಕಟ್ಟಡಕ್ಕೆ ನಿರ್ಮಾಣ ಹಂತದಲ್ಲಿಯೇ ಎಲ್ಲ ದಿಕ್ಕುಗಳಲ್ಲಿ ಪೈಪ್‌ ಅಳವಡಿಸಲಾಗಿತ್ತು. ಆದರೆ ಚಾವಣಿಯ ಮೇಲೆ ಬಿದ್ದ ನೀರು ಈ ಪೈಪ್‌ ಮೂಲಕ ಕೆಳಗೆ ಬಿದ್ದು ಓಡಿ ಹೋಗುತ್ತಿತ್ತು. ಈಗ ಈ ಓಡುವ ಮಳೆ ನೀರಿಗೆ ತಡೆಯೊಡ್ಡಿ ಅಲ್ಲಿಯೇ ಇಂಗಿಸುವ ಕೆಲಸವಾಗಿದೆ.

‘ನಿರ್ಮಿತಿ ಕೇಂದ್ರ ಇಂಗುಗುಂಡಿ ನಿರ್ಮಾಣ ಕಾರ್ಯ ಮಾಡಿದೆ. ಈ ಬಾರಿ ಮಳೆಗಾಲದಲ್ಲಿ ಮಿನಿ ವಿಧಾನಸೌಧದ ಕಟ್ಟಡದ ಮೇಲೆ ಬೀಳುವ ಮಳೆ ನೀರು ಇಲ್ಲಿಯೇ ಇಂಗುವುದರಿಂದ ಬರುವ ಬೇಸಿಗೆಯಲ್ಲಿ ನಮ್ಮಲ್ಲಿ ನೀರಿಗೆ ಬರ ಬರಲಾರದು’ ಎನ್ನುತ್ತಾರೆ ತಹಶೀಲ್ದಾರ್ ಬಸಪ್ಪ ಪೂಜಾರಿ.

ADVERTISEMENT

‘ಮೊದಲ ಹಂತದಲ್ಲಿ ಶಿರಸಿಯ ಮಿನಿ ವಿಧಾನಸೌಧ, ಉಪವಿಭಾಗಾ ಧಿಕಾರಿ ಕಚೇರಿ ಆವರಣದಲ್ಲಿ ಮಳೆ ನೀರು ಮರುಪೂರಣ ಕಾರ್ಯ ಮಾಡಲಾಗುತ್ತಿದೆ. ಉಪ ವಿಭಾಗಾಧಿ ಕಾರಿ ಕಚೇರಿಯ ಎಡಭಾಗದಲ್ಲಿ 25,000 ಲೀಟರ್ ಸಾಮರ್ಥ್ಯದ ಮಳೆ ನೀರು ಸಂಗ್ರಹ ಟ್ಯಾಂಕ್ ನಿರ್ಮಾಣವಾಗುತ್ತಿದೆ.

ಬರುವ ದಿನಗಳಲ್ಲಿ ಮುಂಡಗೋಡ ತಹಶೀಲ್ದಾರ್ ಕಚೇರಿ ಆವರಣದಲ್ಲಿಯೂ ಇಂಗುಗುಂಡಿ ಮಾಡಲಾಗುವುದು. ಉಪ ವಿಭಾಗದ ಲ್ಲಿರುವ ಕಂದಾಯ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಮಳೆ ನೀರು ಇಂಗಿಸುವ ಕಾರ್ಯ ಮಾಡಲಾಗುವುದು. ಯಲ್ಲಾಪುರ, ಸಿದ್ದಾಪುರಗಳಲ್ಲಿ ನಿರ್ಮಾಣ ಹಂತದಲ್ಲಿರುವ ಮಿನಿ ವಿಧಾನಸೌಧ ಕಟ್ಟಡಕ್ಕೆ ಈ ವ್ಯವಸ್ಥೆ ಅಳವಡಿಸಲಾಗುವುದು’ ಎಂದು ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಪ್ರತಿಕ್ರಿಯಿಸಿದರು.

‘ದೊಡ್ಡ ಕಟ್ಟಡ ಹೊಂದಿರುವ ಶಿರಸಿಯ ಮಾರಿಕಾಂಬಾ ಸರ್ಕಾರಿ ಪದವಿಪೂರ್ವ ಕಾಲೇಜು ಇಂಗುಗುಂಡಿ ನಿರ್ಮಾಣಕ್ಕೆ ಆಸಕ್ತಿ ತೋರಿದೆ. ಜೀವಜಲ ಕಾರ್ಯಪಡೆ ಅಥವಾ       ಇನ್ನಾವುದೇ ಸಂಸ್ಥೆ ಅವರಿಗೆ ನೆರವಾಗಲಿದೆ. ಇದೇ ರೀತಿ ನಗರದಲ್ಲಿರುವ ಎಲ್ಲ ಸರ್ಕಾರಿ ಇಲಾಖೆಗಳ ಕಚೇರಿಗಳು, ಖಾಸಗಿ ಕಟ್ಟಡಗಳು ಮಳೆ ನೀರು ಇಂಗಿಸಲು ಮುಂದಾಗಬೇಕು. ಆಗ ಭೂಮಿಯ ಅಂತರ್ಜಲ ಮಟ್ಟ ಹೆಚ್ಚಿ ನೀರಿನ ಬವಣೆ ಕಡಿಮೆಯಾಗುತ್ತದೆ ಎಂದು ಅವರು ‘ಪ್ರಜಾವಾಣಿ’ ಜೊತೆ ಮಾತನಾಡುತ್ತ ಹೇಳಿದರು.

* * 

ಬಿದ್ದ ಮಳೆ ನೀರನ್ನು ಆದಷ್ಟು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ವ್ಯರ್ಥವಾಗ ದಂತೆ ಭೂಮಿಯಲ್ಲಿ ಇಂಗಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು
ಕೆ. ರಾಜು ಮೊಗವೀರ
ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.