ADVERTISEMENT

ಕಚೇರಿ ಅಲೆದು ಸುಸ್ತಾದ ತಾಯಿ

ಅಂಗವಿಕಲ ಮಗನಿಗೆ ಮಾಸಾಶನ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 10:30 IST
Last Updated 21 ಜೂನ್ 2013, 10:30 IST
ನಾರಾಯಣ ನಾಯ್ಕ
ನಾರಾಯಣ ನಾಯ್ಕ   

ಕಾರವಾರ: ಅಂಗವಿಕಲ ಮಗನಿಗೆ ಮಾಸಾಶನ ಕೊಡಿಸಲು ತಾಯಿ ಕಳೆದ ಎಂಟು ತಿಂಗಳಿಂದ ಇಲ್ಲಿಯ ಮತ್ತು ಅಂಕೋಲಾದಲ್ಲಿರುವ ತಹಶೀಲ್ದಾರ್ ಕಚೇರಿ ಅಲೆಯುತ್ತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಚೆಂಡಿಯಾ ಅಲಿಗದ್ದಾ ಗ್ರಾಮದ ನಿವಾಸಿ ಕೇಶವ ನಾಯ್ಕ ಮಂಜುಳಾ ದಂಪತಿಗೆ ಐವರು ಮಕ್ಕಳು. ಐವರ ಪೈಕಿ ಹಿರಿಯವನು ಹುಟ್ಟು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಅವರ ಎರಡೂ ಕಾಲುಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡಿವೆ.

ತಾಲ್ಲೂಕಿನ ಚೆಂಡಿಯಾದಲ್ಲಿರುವ ಭೂಮಿ ಸೀಬರ್ಡ್ ಯೋಜನೆಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡ ನಂತರ ಕೇಶವ ನಾಯ್ಕ ಕುಟುಂಬ ಅಂಕೋಲಾ ತಾಲ್ಲೂಕಿನ ಅವರ್ಸಾ ಸಕಲಬೇಣಕ್ಕೆ ಹೋಗಿ ನೆಲೆಸಿತು. ಅಲ್ಲಿ ನೆಲೆಸಿದ ನಂತರವೂ ಹಿರಿಯ ಪುತ್ರ ನಾರಾಯಣನಿಗೆ ಬರುತ್ತಿದ್ದ ಮಾಸಾಶನ ಕಳೆದ ಒಂದು ವರ್ಷದಿಂದ ನಿಂತಿದೆ.

ಈ ಕುರಿತು ಮಂಜುಳಾ ನಾಯ್ಕ ಜಿಲ್ಲಾ ಖಜಾನೆಯ ಅಧಿಕಾರಿಗಳನ್ನು ವಿಚಾರಿಸಿದ್ದಾಗ ತಹಶೀಲ್ದಾರ್ ಕಚೇರಿಗೆ ಹೋಗುವಂತೆ ತಿಳಿಸಿದ್ದಾರೆ. ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಅಂಕೋಲಾ ತಹಶೀಲ್ದಾರ ಕಚೇರಿಗೆ ಹೋಗಿ ಎಂದು ಸೂಚನೆ ನೀಡಿದ್ದಾರೆ.

ಅವರ್ಸಾದಿಂದ ತರಕಾರಿಗಳನ್ನು ತಂದು ನಗರದಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಮಂಜುಳಾ ಅಂಕೋಲಾ ಹಾಗೂ ಕಾರವಾರ ತಹಶೀಲ್ದಾರ್ ಕಚೇರಿ ಅಲೆದಲೆದು ಸುಸ್ತಾಗಿದ್ದಾರೆ. ಯಾವ ಕಚೇರಿಯಲ್ಲೂ ಅವರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅಧಿಕಾರಿಗಳು, ಸಿಬ್ಬಂದಿ ಸರಿಯಾಗಿ ಸ್ಪಂದಿಸದೇ ಇರುವುದರಿಂದ ಅವರು ರೋಸಿಹೋಗಿದ್ದಾರೆ.

`ಮಗ ನಾರಾಯಣನಿಗೆ ರೂ 50 ಮಾಸಾಶನ ಬರುತ್ತಿತ್ತು. ನಂತರ ರೂ 75 ಬಳಿಕ ರೂ 400 ಮಾಶಸನ ಬರುತ್ತಿತ್ತು. ಕಳೆದ ಒಂದೂವರೆಗೆ ವರ್ಷದಿಂದ ಮಾಸಾಶನ ಬರುವುದು ನಿಂತು ಹೋಗಿದೆ. ಈ ಬಗ್ಗೆ ಕಾರವಾರ ತಹಶೀಲ್ದಾರ್ ಕಚೇರಿ ಹೋಗಿ ಕೇಳಿದರೆ ಅಂಕೋಲಾಕ್ಕೆ ಹೋಗಿ ಎನ್ನುತ್ತಾರೆ. ಅಲ್ಲಿ ಹೋದರೆ ಇಲ್ಲಿಗೆ ಕಳುಹಿಸುತ್ತಾರೆ' ಎಂದು ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.