ADVERTISEMENT

ಕನ್ನಡದ ನಿರ್ಲಕ್ಷ್ಯ ಸಲ್ಲ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 6:00 IST
Last Updated 14 ಸೆಪ್ಟೆಂಬರ್ 2011, 6:00 IST

ಕಾರವಾರ:  ಕನ್ನಡಿಗರು ಕನ್ನಡವನ್ನು ನಿರ್ಲಕ್ಷ್ಯ ಮಾಡಿ ಅನ್ಯ ಭಾಷೆಗಳತ್ತ ಹೆಚ್ಚು ಆಸಕ್ತಿ ವಹಿಸುತ್ತಿರುವುದರಿಂದ ಕನ್ನಡ ಭಾಷೆ ಸಂರಕ್ಷಣೆಗಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ವಿಷ್ಣು ನಾಯ್ಕ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರದ ಬಾಡದ ಶಿವಾಜಿ ಶಿಕ್ಷಕರ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕನ್ನಡ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನ್ಯಭಾಷೆ ವ್ಯಾಮೋಹಕ್ಕೊಳಗಾಗಿ ಕನ್ನಡಿಗರು ಮಾತೃಭಾಷೆ ನಿರ್ಲಕ್ಷಿಸುತ್ತಿರುವುದ್ನು ತಡೆಯಲು ಸರ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಕನ್ನಡ ಮಾಧ್ಯಮದಲ್ಲಿ ಒಂದರಿಂದ 10ನೇ ತರಗತಿಯವರೆಗೆ ಓದಿದ ಅಭ್ಯರ್ಥಿ ಗಳಿಗೆ ಉದ್ಯೋಗಾವಕಾಶದಲ್ಲಿ ಪ್ರಥಮ ಆದ್ಯತೆ ನೀಡುವ ಕಾನೂನು ರಚನೆಯಾ ಗಬೇಕು ಎಂದರು.

`ಕನ್ನಡ ಮತ್ತು ಕನ್ನಡಿಗ~ ವಿಷಯ ಕುರಿತಂತೆ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ. ಜಯಕರ ಭಂಡಾರಿ ಉಪನ್ಯಾಸ ನೀಡಿ, ಪ್ರಪಂಚದಲ್ಲಿ ಅಪಾಯ ಎದುರಿಸುತ್ತಿರುವ ಸುಮಾರು 50 ಭಾಷೆಗಳಲ್ಲಿ ಕರ್ನಾಟಕದ ಕೊಡಗು, ಜೇನು ಕುರುಬರ ಭಾಷೆ ಹೊರತು ಪಡಿಸಿದರೆ ಇನ್ಯಾವುದೂ ಇಲ್ಲ. ಹಿರಿಯ ತಲೆಮಾರುಗಳಿಂದ ಕಿರಿಯ ತಲೆಮಾರುಗಳಿಗೆ ಪ್ರಸಾರವಾಗುತ್ತಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು.

ಶಿವಾಜಿ ಎಜ್ಯುಕೇಶನ್ ಸೊಸೈಟಿ ಆಡಳಿತ ಮಂಡಳಿ ಸದಸ್ಯ ವಾಮನ ಸಾವಂತ ಮಾತನಾಡಿದರು. ಡಿಇಡಿ ಕಾಲೇಜ್ ಪ್ರಾಚಾರ್ಯ ಯೋಗೇಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಬಿಇಡಿ ಕಾಲೇಜ್ ಪ್ರಾಚಾರ್ಯ ಎಸ್. ವಿ.ನಾಯಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.