ADVERTISEMENT

ಕರಾವಳಿ ಉತ್ಸವಕ್ಕೆ ಕಡಲತೀರ ಸಜ್ಜು

ಪಿ.ಕೆ.ರವಿಕುಮಾರ
Published 8 ಡಿಸೆಂಬರ್ 2017, 6:51 IST
Last Updated 8 ಡಿಸೆಂಬರ್ 2017, 6:51 IST
ಕರಾವಳಿ ಉತ್ಸವಕ್ಕೆ ಕಾರವಾರದ ಕಡಲತೀರದಲ್ಲಿ ಸಜ್ಜುಗೊಳ್ಳುತ್ತಿರುವ ಮಯೂರ ವರ್ಮ ನೂತನ ವೇದಿಕೆ
ಕರಾವಳಿ ಉತ್ಸವಕ್ಕೆ ಕಾರವಾರದ ಕಡಲತೀರದಲ್ಲಿ ಸಜ್ಜುಗೊಳ್ಳುತ್ತಿರುವ ಮಯೂರ ವರ್ಮ ನೂತನ ವೇದಿಕೆ   

ಕಾರವಾರ: ಮೂರು ದಿನಗಳ ಕರಾವಳಿ ಉತ್ಸವ ಇದೇ 8ರಿಂದ ಆರಂಭ ಗೊಳ್ಳಲಿದ್ದು, ಇಲ್ಲಿನ ಕಡಲತೀರದ ನೂತನ ಮಯೂರ ವರ್ಮ ವೇದಿಕೆ ಸಜ್ಜುಗೊಂಡಿದೆ. ಅಲ್ಲದೇ ನಗರದಲ್ಲಿ ಹಬ್ಬದ ವಾತಾವರಣ ಮೂಡಿದೆ.

ಕಡಲತೀರದಲ್ಲಿ ಗುರುವಾರ ರಾತ್ರಿವರೆಗೂ ಅಂತಿಮ ಸಿದ್ಧತಾ ಕಾರ್ಯ ಭರದಿಂದ ಸಾಗಿತ್ತು. ವೇದಿಕೆಯನ್ನು ವಿಶೇಷವಾಗಿ ಅಲಂಕೃಗೊಂಡಿದ್ದು, ಗಣ್ಯ ವ್ಯಕ್ತಿಗಳು, ಅಧಿಕಾರಿಗಳು, ಪತ್ರಕರ್ತರು, ಪ್ರಾಯೋಜಕರು ಹಾಗೂ ಪ್ರೇಕ್ಷಕರಿಗಾಗಿ ಪ್ರತ್ಯೇಕವಾಗಿ ಆಸನಗಳನ್ನು ಅಳವಡಿಸಲಾಗಿದೆ. ಜಿಲ್ಲಾ ರಂಗಮಂದಿರಲ್ಲೂ ವೈವಿಧ್ಮಯ ಕಾರ್ಯಕ್ರಮಗಳು ಜರುಗಲಿವೆ.

ವಿಶೇಷ ಆಕರ್ಷಣೆ: ‘ಕಡಲತೀರದ ಯುದ್ಧನೌಕೆ ಸಂಗ್ರಹಾ ಲಯದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ ಹಾಗೂ ಇದೇ ಆವರಣದಲ್ಲಿ ಮರಳು ಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ್‌ ಅವರು ಮರಳು ಶಿಲ್ಪಾಕೃತಿ ರಚಿಸಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವರ್ಣ ರಂಜಿತ ರಂಗೋಲಿ ಮತ್ತು ಛಾಯಾಚಿತ್ರ ಪ್ರದರ್ಶನ ಜರುಗಲಿದೆ. ಮಾಲಾದೇವಿ ಮೈದಾನದಲ್ಲಿ ಪೇಂಟ್ ಬಾಲ್ ಸ್ಪರ್ಧೆ ನಡೆಯಲಿದೆ. ಕೋಡಿಬಾಗದ ವಿಜ್ಞಾನ ಕೇಂದ್ರದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಸಂಚಾರಿ ತಾರಾಲಯ ಪ್ರದರ್ಶನಗೊಳ್ಳಲಿದೆ’ ಎಂದು ಹೆಚ್ಚವರಿ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಉದ್ಘಾಟನೆಗೆ ಕಾಗೋಡು ತಿಮ್ಮಪ್ಪ: ಇದೇ 8ರಂದು ರಾತ್ರಿ 8ಕ್ಕೆ ವೇದಿಕೆಯಲ್ಲಿ ಕರಾವಳಿ ಉತ್ಸವಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿಲಿದ್ದಾರೆ. ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಉಪಸ್ಥಿತರಿರುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಬಿಗಿ ಭದ್ರತೆ: ‘ಉತ್ಸವ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ವಾಹನಗಳ ಪಾರ್ಕಿಂಗ್‌ ಹಾಗೂ ಸುಗಮ ಸಂಚಾರಕ್ಕೂ ವ್ಯವಸ್ಥೆ ಮಾಡಲಾಗಿದೆ’ ಎಂದು ಡಿವೈಎಸ್ಪಿ ಎನ್‌.ಟಿ.ಪ್ರಮೋದರಾವ್‌ ತಿಳಿಸಿದರು.
ಭಾನುವಾರ ಸಂತೆ ಸ್ಥಳಾಂತರ

‘ಉತ್ಸವದ ಪ್ರಯುಕ್ತ ಭಾನುವಾರ ಸಂತೆಯನ್ನು ತಾತ್ಕಾಲಿಕವಾಗಿ ಹೈಚರ್ಚ್‌ ರಸ್ತೆಯಿಂದ ದೋಬಿಘಾಟ್‌ವರೆಗೆ ಮತ್ತು ರಾಧಾಕೃಷ್ಣ ದೇವಸ್ಥಾನದಿಂದ ಅರ್ಬನ್ ಬ್ಯಾಂಕಿನವರೆಗೆ ಸ್ಥಳಾಂತರಿಸಿದ್ದು, ವರ್ತಕರು ಭಾನುವಾರ ನಿಗದಿ ಪಡಿಸಿದ ಸ್ಥಳದಲ್ಲಿ ಕುಳಿತು ವ್ಯಾಪಾರ ನಡೆಸಬೇಕು’ ಎಂದು ಪೌರಾಯುಕ್ತ ಎಸ್‌.ಯೋಗೇಶ್ವರ ತಿಳಿಸಿದ್ದಾರೆ.

ಉತ್ಸವದಲ್ಲಿ ಇಂದು

ಮಾಲಾದೇವಿ ಮೈದಾನದಲ್ಲಿ ಬೆಳಿಗ್ಗೆ 10ರಿಂದ
* ಬೆಂಗಳೂರಿನ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ವಿ.ಗೌರಿ ನಾಗರಾಜ ಅವರಿಂದ ನೃತ್ಯ ಕಾರ್ಯಕ್ರಮ.
* ಹಾಸ್ಯ ಕಲಾವಿದ ಪ್ರಾಣೇಶ್ ಮತ್ತು ತಂಡದವರಿಂದ ನಗೆಹಬ್ಬ
* ಮೈಸೂರಿನ ಕಲ್ಪಿತಾ.ಎಂ ರೇವಣಕರ ಅವರಿಂದ ಭರತನಾಟ್ಯ.

ರವೀಂದ್ರನಾಥ ಟ್ಯಾಗೋರ್ ಕಡಲತೀರ (ಮಧ್ಯಾಹ್ನ 3 ಗಂಟೆಗೆ)
* ಬೀಚ್ ವಾಲಿಬಾಲ್

ಮಯೂರ ವರ್ಮ ವೇದಿಕೆ (ಸಂಜೆ 5.30ರಿಂದ)
* ಕಾರವಾರದ ಸಂಜಯ ಮತ್ತು ತಂಡದವರಿಂದ ರಾಕ್ ಬ್ಯಾಂಡ್
* ಹುಬ್ಬಳ್ಳಿಯ ನಿಖಿಲ್ ಜೋಶಿ ಅವರಿಂದ ಸಿತಾರ ವಾದನ
* ಶಿರಸಿಯ ಸೀಮಾ ಭಾಗ್ವತ್ ಮತ್ತು ವಿದೂಷಿ ದೀಪಾ ಅವರಿಂದ ಪಾವನ ಪಾದ ಭರತನಾಟ್ಯ
* ಮುಂಡಗೋಡ ಟಿಬೇಟಿಯನ್ ತಂಡದಿಂದ ನೃತ್ಯ.
* ಮುಂಬೈನ ರಮಿಂದರ್ ಖುರಾನಾ ಅವರಿಂದ ಕಥಕ್ ನೃತ್ಯ
* ಬೆಂಗಳೂರಿನ ಪ್ರಹ್ಲಾದ್ ಆಚಾರ್ಯ ಶ್ಯಾಡೋ ಷೋ
* ಬಾಲಿವುಡ್‌ನ ಹಿನ್ನೆಲೆ ಗಾಯಕಿ ಶಾಲ್ಮಲಿ ಕೋಲ್ಗಡೆ ಅವರಿಂದ ರಸಮಂಜರಿ

* * 

ಉತ್ಸವಕ್ಕೆ ಅಂತಿಮ ಹಂತದ ಸಿದ್ಧತೆ ಆಗಿದ್ದು, ಕಾರ್ಯಕ್ರಮ ವೀಕ್ಷಿಸಲು ಕಡಲತೀರದಲ್ಲಿ 12 ಸಾವಿರ ಆಸನ ಹಾಕಲಾಗಿದೆ ಹಾಗೂ 10 ಎಲ್‌ಇಡಿ ಪರದೆಗಳನ್ನು ಅಲ್ಲಲ್ಲಿ ಅಳವಡಿಸಲಾಗುವುದು
ಆರ್‌.ಪಿ.ನಾಯ್ಕ, ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.