ADVERTISEMENT

ಕಸಾಯಿಖಾನೆ ಸ್ಥಾಪಿಸದಿರಲು ಸಾರ್ವಜನಿಕರ ಮನವರಿಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 6:30 IST
Last Updated 15 ಅಕ್ಟೋಬರ್ 2012, 6:30 IST

ದಾಂಡೇಲಿ: ಇಲ್ಲಿಯ ಗಾಂಧೀ ನಗರ ಪ್ರದೇಶದಲ್ಲಿ ಕಸಾಯಿಖಾನೆಯನ್ನು ನಿರ್ಮಿಸುವುದು ಬೇಡ ಎಂದು ವಿವಿಧ ಸಂಘಟನೆಗಳು ಇಲ್ಲಿಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಪುಷ್ಪಲತಾ ಅವರ ಎದುರು ಪ್ರತಿಭಟನೆ ನಡೆಸಿ ಲಿಖಿತ ಮನವಿ ಅರ್ಪಿಸಿದವು.

ಕಸಾಯಿಖಾನೆಯನ್ನು ಸ್ಥಾಪಿಸುವ ಕುರಿತು ದಶಕಗಳ ಹಿಂದೆಯೇ ದಾಂಡೇಲಿಯಲ್ಲಿ ಚರ್ಚೆಯಾಗಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇದೀಗ ಮತ್ತೆ ಈ ವಿಷಯವನ್ನು ಪ್ರಾಸ್ತಾಪಕ್ಕೆ ತಂದಿದ್ದರಿಂದ ದಾಂಡೇಲಿಯ ಬಹುಸಂಖ್ಯಾತ ಜನರ ಭಾವನೆಯನ್ನು ಘಾಸಿಗೊಳಿಸಿದಂತಾಗಿದೆ. ದಾಂಡೇಲಿಯಲ್ಲಿ ದೇಶದ ಎಲ್ಲ ಪ್ರದೇಶದ ಜನರು ವಾಸಿಸುತ್ತಿದ್ದು, ಗೋವುಗಳನ್ನು ಹಾಗೂ ದನಕರುಗಳನ್ನು ಧಾರ್ಮಿಕ ಭಾವನೆಯ ಹಿನ್ನೆಲೆಯಲ್ಲಿ ಪೂಜನೀಯವಾಗಿ ಕಾಣುತ್ತಿದ್ದಾರೆ.

ಆದ್ದರಿಂದ ಅನಗತ್ಯವಾಗಿ ಈ ವಿಷಯವನ್ನು ಪ್ರಾಸ್ತಾಪಿಸುತ್ತಿರುವುದು ಸರಿಯಲ್ಲ. ಈ ವಿಷಯದಲ್ಲಿ ಮುತುವರ್ಜಿ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದಿಂದ ಕಸಾಯಿಖಾನೆ ಆರಂಭಿಸಲು ಎಲ್ಲಿಯೂ ಪರವಾನಗಿ ಇಲ್ಲದಿರುವಾಗ ದಾಂಡೇಲಿಯಲ್ಲಿ ಈ ವಿಷಯ ಇಷ್ಟೇಕೆ ತೀವ್ರ ರೂಪವನ್ನು ತಾಳಿತು ಎಂದು ಉಪವಿಭಾಗಾಧಿಕಾರಿಗಳಿಗೆ  ಗೋ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರೋಷನ್ ನೇತ್ರಾವಳಿ ಪ್ರಶ್ನಿಸಿದರು.

ಈ ವಿಷಯವನ್ನು ಇನ್ನೂ ಚರ್ಚೆಗೆ ಒಳಪಡಿಸಿದರೆ ಜನರ ಭಾವನೆಯನ್ನು ಕೆರಳಿಸಿದಂತಾಗುತ್ತದೆ. ಆದ್ದರಿಂದ ಇದನ್ನು ಇಲ್ಲಿಗೆ ಕೈಬಿಡಬೇಕು ಎಂದು ವಿರೋಧವನ್ನು ವ್ಯಕ್ತಪಡಿಸಿದ ಎಲ್ಲ ಸಂಘಟನೆಗಳ ಪರವಾಗಿ ಮಾತನಾಡಿ, ಉಪವಿಭಾಗಾಧಿಕಾರಿಗಳಿಗೆ ಸಮಸ್ಯೆಯ ಮನವರಿಕೆ ಮಾಡಿದರಲ್ಲದೇ, ಎಲ್ಲ ಸಂಘ ಸಂಸ್ಥೆಗಳ ಮನವಿಗಳನ್ನು ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT