ADVERTISEMENT

ಕಾರವಾರದಲ್ಲಿ ಕ್ಯಾಮೆರಾ ಕಣ್ಗಾವಲು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 5:23 IST
Last Updated 10 ಡಿಸೆಂಬರ್ 2013, 5:23 IST
ಕಾರವಾರದ ಶಿವಾಜಿ ವೃತ್ತದಲ್ಲಿರುವ ವಿದ್ಯುತ್‌ ಕಂಬಕ್ಕೆ ಸಿ.ಸಿ ಕ್ಯಾಮೆರಾ ಅಳವಡಿಸಿರುವುದು.
ಕಾರವಾರದ ಶಿವಾಜಿ ವೃತ್ತದಲ್ಲಿರುವ ವಿದ್ಯುತ್‌ ಕಂಬಕ್ಕೆ ಸಿ.ಸಿ ಕ್ಯಾಮೆರಾ ಅಳವಡಿಸಿರುವುದು.   

ಕಾರವಾರ: ಬೇಕಾಬಿಟ್ಟಿ ವಾಹನ ಚಲಾಯಿಸುವುದು, ಸಾರ್ವಜನಿಕರಿಗೆ ತೊಂದರೆ ನೀಡುವುದು, ಹಾಡ ಹಗಲಿನಲ್ಲಿಯೇ ಕಳ್ಳತನ, ದರೋಡೆಗಳನ್ನು ಮಾಡಿ ಸುಳಿವು ಸಿಗದ ಹಾಗೆ ತಪ್ಪಿಸಿಕೊಳ್ಳುತ್ತಿರುವವರಿಗಾಗಿ ಪೊಲೀಸ್‌ ಇಲಾಖೆ ಈಗ ನಗರದಲ್ಲಿ ಹದ್ದಿನ ಕಣ್ಣನ್ನು ನೆಟ್ಟಿದೆ.

ಈಗಾಗಲೇ ಅನೇಕ ಪ್ರಮುಖ ನಗರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಪೊಲೀಸರ ಅನುಪಸ್ಥಿತಿಯಲ್ಲಿ ಈ ಕ್ಯಾಮೆರಾಗಳು ಜನರು ಹಾಗೂ ವಾಹನಗಳ ಚಲನವಲಗಳ ಮೇಲೆ ಕಣ್ಣಿಟ್ಟಿರುತ್ತದೆ. ಅನೇಕ ಪ್ರಕರಣಗಳಲ್ಲಿ ಸಿ.ಸಿ ಕ್ಯಾಮೆರಾಗಳಿಂದ ಪರಿಹಾರವಾದ ಉದಾಹರಣೆಯ ಹಿನ್ನೆಲೆಯಲ್ಲಿ ಕಾರವಾರ ನಗರದಲ್ಲಿಯೂ ಸಿ.ಸಿ ಕ್ಯಾಮೆರಾ ಅಳವಡಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ನಗರದ ಒಟ್ಟು ಎಂಟು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ. ಇದರಲ್ಲಿ ಮೊದಲ ಹಂತವಾಗಿ ನಾಲ್ಕು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ನಗರದ ಶಿವಾಜಿ ಸರ್ಕಲ್‌, ಹೂವಿನ ಚೌಕದಲ್ಲಿ ಈಗಾಗಲೇ ಕ್ಯಾಮೆರಾ ಅಳವಡಿಸಲಾಗಿದೆ. ಸವಿತಾ ಸರ್ಕಲ್‌ ಮತ್ತು ಸುಭಾಷ ವೃತ್ತಗಳಲ್ಲಿ ತಂತಿ ಜೋಡಣೆ ಕೆಲಸ ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ ಸಿ.ಸಿ ಕ್ಯಾಮೆರಾಗಳು ಕಾರ್ಯಾರಂಭ ಮಾಡಲಿದೆ.

ನಗರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವ, ಪೊಲೀಸರ ಕಣ್ತಪ್ಪಿಸಿ ನಗರಕ್ಕೆ ನುಗ್ಗುವ ವಾಹನಗಳ ಮೇಲೆ ನಿಗಾ ವಹಿಸಲು ಈ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಮನ ಬಂದಂತೆ ವಾಹನ ಚಲಾಯಿಸುವುದು, ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುವವರನ್ನು ಹದ್ದು ಬಸ್ತಿನಲ್ಲಿಡಲು ಈ ಕ್ಯಾಮೆರಾ ಸಹಕಾರಿಯಾಗಲಿದೆ.

ನಗರದಲ್ಲಿ ಇತ್ತೀಚೆಗಷ್ಟೇ ಕಾರಿನಲ್ಲಿ ಬಂದ ಐವರು ಆರೋಪಿಗಳು ಕಾಜುಬಾಗದ ಉಲ್ಲಾಸ ನೇತಲಕರ್‌ ಅವರ ಮನೆಗೆ ನುಗ್ಗಿ ಹಾಡ ಹಗಲೇ ಹಲ್ಲೆ ನಡೆಸಿದ್ದರು. ಕೆಎಚ್‌ಬಿ ಕಾಲೊನಿಯ ಮನೆಯೊಂದರಲ್ಲಿ ಕಳ್ಳರು ಬೆಳಿಗ್ಗೆಯೇ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದರು. ಇಂತಹ ಪ್ರಕರಣಗಳನ್ನು ನಿಯಂತ್ರಿಸಲು ನಗರದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.

‘ನಗರ ಪ್ರವೇಶಿಸುವ ವಾಹನಗಳ ಬಗ್ಗೆ ನಿಗಾ ಇಡಲು ಹಾಗೂ ಸಂಚಾರ ವ್ಯವಸ್ಥೆ ಮೇಲೆ ನಿಯಂತ್ರಣ ಸಾಧಿಸಲು ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಗಲು ದರೋಡೆಯಂತಹ ಪ್ರಕರಣಗಳನ್ನು ಇದರಿಂದ ತಡೆಯಬಹುದು. ಸದ್ಯಕ್ಕೆ ನಾಲ್ಕು ಕಡೆ ಮಾತ್ರ ಕ್ಯಾಮೆರಾ ಅಳವಡಿಸಲಾಗಿದೆ. ನಂತರ ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸುವ ಯೋಜನೆ ಇದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್‌ ಎನ್.ಆರ್. ಮುಕ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.