ADVERTISEMENT

ಕುಡಿಯುವ ನೀರಿಗಾಗಿ ಮನವಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 8:10 IST
Last Updated 11 ಏಪ್ರಿಲ್ 2012, 8:10 IST

ಭಟ್ಕಳ: ತಾಲ್ಲೂಕಿನಾದ್ಯಂತ ತೀವ್ರಗೊಂಡಿರುವ ನೀರಿನ ಸಮಸ್ಯೆ ಬಗೆಹರಿಸಲು ಸೂಕ್ತ ಅನುದಾನ ಕಲ್ಪಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕ ಜೆ.ಡಿ.ನಾಯ್ಕ ಇಲ್ಲಿನ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮುಖ್ಯಮಂತ್ರಿಗಳು ಕುಡಿಯುವ ನೀರಿನ ಬವಣೆ ನೀಗಿಸಲು ಪ್ರತಿ ತಾಲ್ಲೂಕಿಗೆ 30 ಲಕ್ಷ ರೂಪಾಯಿ ಅನುದಾನ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನು ಹೇಳಿ ಹಲವು ದಿನಗಳು ಕಳೆದರೂ ಈವರೆಗೆ ಹಣ ಮಂಜೂರಾಗಿಲ್ಲ ಎಂದುಆರೋಪಿಸಿದರು.

ಭಟ್ಕಳ ತಾಲ್ಲೂಕಿನ ಮಾವಿನಕುರ್ವೆ, ಬೆಳಕೆ, ಬಂದರ್, ಮುಂಡಳ್ಳಿ ಸೇರಿದಂತೆ ಹಲವು ಗ್ರಾಮೀಣ ಪ್ರದೇಶ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದೆ. ನೀರಿಗಾಗಿ ಜನರಲ್ಲಿ ಹಾಹಾಕಾರ ಉಂಟಾಗಿದೆ ಎಂದು ಅವರು ಹೇಳಿದರು.

ಪ್ರತಿವರ್ಷ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ ಅವರು, ನೀರಿನ ಅಭಾವವಿರುವ ಪ್ರದೇಶಗಳಲ್ಲಿ ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಕೋರಿದರು.

ಭಟ್ಕಳ ತಾಲ್ಲೂಕಿನಲ್ಲಿನ ನೀರಿನ ಸಮಸ್ಯೆ ಪರಿಹರಿಸಲು ಹೆಚ್ಚಿನ ಅನುದಾನ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.ಉಪವಿಭಾಗಾಧಿಕಾರಿ ಅನುಪಸ್ಥಿತಿಯಲ್ಲಿ ಕಛೇರಿಯ ವ್ಯವಸ್ಥಾಪಕ ಎಂ.ಎ.ಘನಿ ಮನವಿ ಸ್ವೀಕರಿಸಿದರು.  

ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿಠ್ಠಲ ನಾಯ್ಕ, ಜಿ.ಪಂ.ಸದಸ್ಯೆ ಜಯಶ್ರೆ ಮೊಗೇರ್, ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ ನಾಯ್ಕ, ಜಿ.ಪಂ. ಮಾಜಿ ಉಪಾಧ್ಯಕ್ಷ ರಾಮ ಮೊಗೇರ್‌ಮತ್ತಿತರರು ಭಾಗವಹಿಸಿದ್ದರು.

ಪ್ರಮುಖರಾದ ವೆಂಕ್ಟಯ್ಯ ಭೈರುಮನೆ, ಸಾದುಲ್ಲಾ ದಾಮ್ದಾ, ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ಮಹಾಬಲೇಶ್ವರ ನಾಯ್ಕ, ಶ್ರೀಧರ ನಾಯ್ಕ, ತಾ.ಪಂ.ಸದಸ್ಯೆ ಉಷಾ ನಾಯ್ಕ, ಎಂ.ಪಿ. ಶೈಲೇಂದ್ರಕುಮಾರ್‌ನಾರಾಯಣ ನಾಯ್ಕ, ರಾಜೇಶ ನಾಯ್ಕ, ಮಾಜಿ ತಾ.ಪಂ.ಅಧ್ಯಕ್ಷೆ ಜಯಲಕ್ಷ್ಮಿಗೊಂಡ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.