ADVERTISEMENT

ಕೂಲಿಗಾಗಿ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 7:50 IST
Last Updated 18 ಅಕ್ಟೋಬರ್ 2011, 7:50 IST
ಕೂಲಿಗಾಗಿ ಆಗ್ರಹಿಸಿ ಪ್ರತಿಭಟನೆ
ಕೂಲಿಗಾಗಿ ಆಗ್ರಹಿಸಿ ಪ್ರತಿಭಟನೆ   

ಮುಂಡಗೋಡ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ 15ದಿನಗಳ ಕೆಲಸ ನೀಡುವದಾಗಿ ಹೇಳಿ ಕೇವಲ ನಾಲ್ಕೆ ದಿನದಲ್ಲಿ ಕೆಲಸ ಮುಗಿದಿದೆ ಎಂದು ಕೂಲಿಕಾರರಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ತಾಲ್ಲೂಕಿನ ಚವಡಳ್ಳಿ ಗ್ರಾ.ಪಂ. ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ದುಡಿಯುತ್ತೇವೆ ಎನ್ನುವವರಿಗೆ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸರ್ಕಾರದ ಆದೇಶದಂತೆ 15 ದಿನಗಳ ಕೂಲಿ ಹಣ ನೀಡುವಂತೆ ಆಗ್ರಹಿಸಿದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಆರ್.ಎಚ್.ಕುಲಕರ್ಣಿ ಪ್ರತಿಭಟನಾ ನಿರತರೊಂದಿಗೆ ಮಾತನಾಡಿ ನಿಗದಿಪಡಿಸಿದ ಕೆಲಸ ಕಡಿಮೆ ದಿನಗಳಲ್ಲಿ ಮುಗಿದಿದೆ. ಇದರಿಂದ ದುಡಿದ ದಿನದಷ್ಟೆ ಕೂಲಿ ಹಣ ನೀಡಲಾಗುವದು ಎಂದು ಹೇಳಿದರು.

ಆದರೆ ಅದಕ್ಕೆ ಒಪ್ಪದ ಪ್ರತಿಭಟನಾಕಾರರು 15 ದಿನಗಳವರೆಗೆ ಕೂಲಿಗಾಗಿ ನೇಮಿಸಿಕೊಂಡಿದ್ದು ಏಕೆ? ನಾವು ದುಡಿಯುತ್ತೇವೆ ನಮಗೆ ಕೆಲಸ ಕೊಡಿ ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ಹಾಗೂ ತಾ.ಪಂ.ಕಾ.ನಿ.ಅ ಗಳ ನಡುವೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆದರೂ ಪ್ರಯೋಜನವಾಗಲಿಲ್ಲ.  ನಂತರ ಬೇರೆಕೆಲಸವಿದೆ ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿ ಹೊರ ನಡೆದರು.

ಒಂದು ಹಂತದಲ್ಲಿ ಗ್ರಾ.ಪಂ. ಪ್ರಭಾರ ಪಿ.ಡಿ.ಒ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಯೋಜನೆಯಲ್ಲಿ ಕೆಲಸ ನೀಡುವ ಮೊದಲು ಕೂಲಿಕಾರರನ್ನು ಅರ್ಜಿ 8ರಲ್ಲಿ ಭರ್ತಿ ಮಾಡಿಕೊಂಡಿಲ್ಲವೇಕೆ? ಎಂದು ಪ್ರಶ್ನಿಸಿದರು.

ಗಡಿಬಿಡಿಯಲ್ಲಿ ಹೀಗಾಗಿದೆ ಎಂದು ಪಿ.ಡಿ.ಓ ಹಾರಿಕೆಯ ಉತ್ತರ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷ ಮಂಜುನಾಥ ಕಟಗಿ ಹಾಗೂ ಕೆಲ ಸದಸ್ಯರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು.


 15ದಿನಗಳ ಕೆಲಸಕ್ಕೆಂದು ಹೇಳಿ 80ರಷ್ಟು ಕೂಲಿಕಾರರನ್ನು ತೆಗೆದುಕೊಂಡು ನಾಲ್ಕೇ ದಿನದಲ್ಲಿ ಕೆಲಸ ಮುಗಿದಿದೆ ಎಂದು ಹೇಳಿರುವುದು ಕೂಲಿಕಾರರಿಗೆ ಅನ್ಯಾಯ ಬಗೆ ದಂತಾಗಿದೆ. ಕೂಡಲೇ 15ದಿನಗಳ ಪೂರ್ತಿ ಕೂಲಿ ಹಣವನ್ನು ಬಟವಡೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿ ಗ್ರಾ.ಪಂ.ದ ಎದುರು ಧರಣಿ ಮುಂದುವರೆಸಿದರು.
 
ಮುಂದಿನ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ಸಂಜೆ ಧರಣಿಯನ್ನು ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಕ.ಪ್ರಾಂ.ಕೃ.ಕೂ. ಸಂಘದ ಭೀಮಣ್ಣ ಭೋವಿ, ಹನ ಮಂತಪ್ಪ ಭೋವಿ, ಬಸವರಾಜ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT