ADVERTISEMENT

ಕೈಗಾ ನಿರಾಶ್ರಿತರಿಂದ ಉಪವಾಸ ಸತ್ಯಾಗ್ರಹ ಆರಂಭ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 12:47 IST
Last Updated 11 ಜುಲೈ 2013, 12:47 IST

ಕಾರವಾರ: ಕೈಗಾ ಅಣು ವಿದ್ಯುತ್ ಯೋಜನೆಗೆ ಭೂಮಿ ನೀಡಿ 25 ವರ್ಷಗಳಾದರೂ ನಮಗೆ ಯಾವುದೇ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿ 13 ನಿರಾಶ್ರಿತ ಕುಟುಂಬದ ಸದಸ್ಯರು ಬುಧವಾರ ಕೈಗಾ ಬಳಿಯ ಮಲ್ಲಾಪುರ ಟೌನ್‌ಶಿಪ್ ಗೇಟ್ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದರು. 

`ಕೈಗಾ ಅಣು ವಿದ್ಯುತ್ ಯೋಜನೆಯಲ್ಲಿ ದೊರಕಬೇಕಾದ ಸಹಾನುಭೂತಿಯ ಉದ್ಯೋಗದಿಂದ ನಾವು ವಂಚಿತವಾಗಿದ್ದು, ತಮ್ಮ ಬೇಡಿಕೆಯನ್ನು ಇದುವರೆಗೂ ಈಡೇರಿಸಿಲ್ಲ. ಅನೇಕ ಬಾರಿ ಕೇಂದ್ರಕ್ಕೆ, ಎನ್.ಪಿ.ಸಿ.ಎಲ್. ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪರಿಹಾರ ಮಾತ್ರ ದೊರಕಲಿಲ್ಲ' ಎಂದು ಧರಣಿನಿರತರು ದೂರಿದರು.

ಇಲ್ಲಿನ ಸಂತ್ರಸ್ತರಿಗೆ ಸಹಾನುಭೂತಿಯಿಂದ ಉದ್ಯೋಗ ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದರೂ ಕೈಗಾ ಆಡಳಿತ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ನಿರಾಶ್ರಿತ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಆದೇಶವಾಗಿದ್ದು, ಈ ಪ್ರಕಾರ 13 ಜನರಿಗೆ ಉದ್ಯೋಗ ಕಲ್ಪಿಸಬೇಕಾಗಿದೆ. ಆದರೆ, ಕೈಗಾ ಅಧಿಕಾರಿಗಳು ಸಬೂಬು ನೀಡಿ ದಿನ ಕಳೆಯುತ್ತಿದ್ದಾರೆ. ಆದ್ದರಿಂದ ಹೋರಾಟ ಅನಿವಾರ್ಯವಾಗಿದೆ ಎಂದರು.

`ಬುಧವಾರದಿಂದ ಮೂರು ದಿನಗಳ ಕಾಲ ಶಾಂತಿಯುತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು. ನಂತರ ಉಗ್ರ ಹೋರಾಟ ನಡೆಸಲಾಗುವುದು. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು' ಎಂದರು.

ಕೈಗಾ ನಿರಾಶ್ರಿತರಾದ ಬಾವಟೇಶ ಪುತ್ತು ಡಿಸೋಜಾ, ಉದಯ ಗಜಾ ಬಾಂದೇಕರ, ರಾಮದಾಸ ಘನಶ್ಯಾಮ ಬಾಂದೇಕರ, ಮಾಬ್ಳು ರಾಮ ಬಾಂದೇಕರ, ರೋಜಾರಿನ ಅಂಥೋನಿ ಫರ್ನಾಂಡಿಸ್, ನೂರ್ ಜಹಾನ್ ಇಮಾಮುದ್ದೀನ್ ಶೇಖ್, ಅಮೀನ ಬಾಯಿ ಉಸ್ಮಾನ ಶೇಖ್, ದಾವುದ್ ಇಸ್ಮಾಯಿಲ್ ಖಾನ್, ಹಫೀಜಾಬಾಯಿ ಇಸ್ಮಾಯಿಲ್ ಖಾನ್, ಹೊನ್ನು ಅಣ್ಣಯ್ಯ ಗೌಡ, ಅಲಿಜಾ ಬಿ.  ಡಿಸೋಜಾ, ಲಕ್ಷ್ಮಣ ತಮ್ಮು ಗೌಡ, ಜಗದೀಶ ಪುಟ್ಟಣ್ಣ ಗೌಡ ಹಾಗೂ ಕುಟುಂಬದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಧರಣಿಗೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಾಂತಾ ಬಾಂದೇಕರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಶೇಖರ ಬಾಂದೇಕರ ಸೇರಿದಂತೆ ಹಲವರು ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.