ADVERTISEMENT

ಗಂಗಾವಳಿಯಿಂದ ಅಕ್ರಮ ಮರಳು ಸಾಗಾಟ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೌನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 8:31 IST
Last Updated 21 ಡಿಸೆಂಬರ್ 2012, 8:31 IST
ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ದೋಣಿಯಿಂದ ಮರಳು ಮೇಲೆತ್ತಲು ನದಿ ದಡದಲ್ಲಿ ಕ್ರೇನ್ ಇಟ್ಟಿರುವುದು.
ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ದೋಣಿಯಿಂದ ಮರಳು ಮೇಲೆತ್ತಲು ನದಿ ದಡದಲ್ಲಿ ಕ್ರೇನ್ ಇಟ್ಟಿರುವುದು.   
ಅಂಕೋಲಾ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿಯನ್ನು ಪಡೆಯದೇ; ಪಡೆದರೂ ನಿಯಮಗಳನ್ನು ಗಾಳಿಗೆ ತೂರಿ ಗಂಗಾವಳಿ ನದಿಯಲ್ಲಿ ದಿನನಿತ್ಯ ಲಕ್ಷಾಂತರ ರೂಪಾಯಿ ಮೌಲ್ಯದ ಮರಳಿನ ಅಕ್ರಮ ಸಾಗಾಟಮಾಡಲಾಗುತ್ತಿದೆ.
 
ಈ ಬಗ್ಗೆ ಅಧಿಕಾರಿಗಳು ಮಾತ್ರ  ಮೌನ ವಹಿಸಿದ್ದು, ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅನಧಿಕೃತವಾಗಿಯೇ ಮರಳು ಗಣಿಗಾರಿಕೆ ನಿರಾಂತಕವಾಗಿ ನಡೆಯುತ್ತಿದೆ. ಕೆಲವರು ಮಾತ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿಯನ್ನು ಪಡೆದಿದ್ದಾರೆ. ಪಡೆದವರೂ ಕೂಡ ಈ ಅಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 
 
ಗಂಗಾವಳಿ ನದಿಯು ಅತ್ಯಂತ ಸೂಕ್ಷ್ಮ ಜಲಚರಗಳ ತಾಣವಾಗಿದ್ದು, ಈ ಹಿಂದೆ ಇಲ್ಲಿ ಹೇರಳವಾಗಿ ಕಪ್ಪೆಚಿಪ್ಪು ದೊರೆಯುತ್ತಿತ್ತು. ಆದರೆ ಈ ಮರಳು ಗಣಿಗಾರಿಕೆಯಿಂದಾಗಿ ಜಲಚರಗಳು ನಾಶವಾಗುವುದರ ಜೊತೆಗೆ ಕಪ್ಪೆ-ಚಿಪ್ಪು ಕೂಡ ದೊರೆಯದಂತಾಗಿದೆ. ನದಿಯ ಅಕ್ಕ ಪಕ್ಕದಲ್ಲಿ ಕಾಂಡ್ಲಾ ಗಿಡಗಳು ಬೆಳೆದು ಜಲಚರಗಳಿಗೆ ಆಶ್ರಯವನ್ನು ನೀಡುವುದರ ಜೊತೆಗೆ ಅವುಗಳ ಸಂತಾನೋತ್ಪತ್ತಿಗೆ ಪೂರಕವಾಗಿತ್ತು. ಆದರೆ ಅದೂ ಕೂಡ ಇಂದು ನಾಶವಾಗುವತ್ತ ಸಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಷರತ್ತಿನಂತೆ `ಸಂಪೂರ್ಣವಾಗಿ ಮಾನವ ಶ್ರಮದಿಂದ ಸಾಂಪ್ರದಾಯಿಕವಾಗಿ ಮರಳನ್ನು ತೆಗೆಯಬೇಕು. ಯಾವುದೇ ಯಂತ್ರೋಪಕರಣಗಳನ್ನು ಬಳಸುವಂತಿಲ್ಲ. ನದಿಯ ತಳದಿಂದ ಕೇವಲ ಅರ್ಧ ಮೀಟರ್ ಆಳದವರೆಗೆ ಮಾತ್ರ ಮರಳನ್ನು ತೆಗೆಯಬೇಕು'. ಆದರೆ ಇಲ್ಲಿ ಇಲಾಖೆಯ ಎಲ್ಲಾ ಷರತ್ತುಗಳು ಉಲ್ಲಂಘನೆಯಾಗಿ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಮರಳು ತೆಗೆಯಲು ಯಾಂತ್ರೀಕೃತ ದೋಣಿಯನ್ನು ಬಳಸಿದರೆ, ಅದನ್ನು ಮೇಲೆತ್ತಲು ಕ್ರೇನ್ ಉಪಯೋಗಿಸಲಾಗುತ್ತಿದೆ. 
 
ಕೊಂಕಣ ರೈಲ್ವೆ ಸೇತುವೆ ಕೆಳಭಾಗದಲ್ಲಿ ಮರಳನ್ನು ತೆಗೆಯುವುದರಿಂದ ಸೇತುವೆಗೂ ಅಪಾಯ ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಬೆಳಸೆ ಗ್ರಾಮ ಪಂಚಾಯಿತಿ ಅನಧಿಕೃತ ಮರಳು ವ್ಯವಹಾರದ ವಿರುದ್ಧ ದೂರು ಸಲ್ಲಿಸಿತ್ತು. ದೂರಿನನ್ವಯ ತಹಶೀಲ್ದಾರ ಜಿ.ಎನ್. ನಾಯ್ಕ, ಭೂ ವಿಜ್ಞಾನಿ ಚಂದ್ರಶೇಖರ ಶಿರೂರಿನಲ್ಲಿರುವ ಅಕ್ರಮ ಮರಳು ಅಡ್ಡೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. 
 
ಈ ಸಂದರ್ಭದಲ್ಲಿ ಭೂ ವಿಜ್ಞಾನ ಚಂದ್ರಶೇಖರ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಈಗ ಮತ್ತೆ ಅದೇ ಸ್ಥಳದಲ್ಲಿಯೇ ಅನಧಿಕೃತ ಮರಳು ಸಾಗಣೆ ಚಟುವಟಿಕೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.