ಕಾರವಾರ: ಇಲ್ಲಿಯ ರವೀಂದ್ರನಾಥ ಟ್ಯಾಗೋರ್‌ಕಡಲತೀರಕ್ಕೆ ಹೋಗುವ ರಸ್ತೆಯ ಅಂಚಿಗೆ ಇರುವ ಗಟಾರಿನಲ್ಲಿ ಬಿದ್ದು ಸಾವಿನಂಚಿನಲ್ಲಿದ್ದ ಮೂರು ನಾಯಿಮರಿಗಳನ್ನು ಸಾರ್ವಜನಿಕರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಶುಕ್ರವಾರ ನಗರದ ರಿಮಾಂಡ್ ಹೋಮ್ ಬಳಿ ನಡೆದಿದೆ.
ರಿಮಾಂಡ್ ಹೋಂ ಆವರಣದಲ್ಲಿ ನಾಯಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ. ಅಲ್ಲಿಯೇ ಆಟವಾಡಿಕೊಂಡಿದ್ದ ನಾಯಿ ಮರಿಗಳು ಆಟವಾಡುತ್ತ ಫುಟ್‌ಪಾತ್ ಅಡಿಯಿಂದ ಗಟಾರಿಗೆ ನೀರು ಹೋಗಲು ಮಾಡಿರುವ ಮಾರ್ಗದಿಂದ ಒಳಗೆ ಹೋಗಿ ಗಟಾರು ಸೇರಿ ಬೊಬ್ಬೆಯಿಡುತ್ತಿದ್ದವು. ಗಟಾರಿನಲ್ಲಿ ಬಿದ್ದ ಮರಿಗಳನ್ನು ಮೇಲೆತ್ತಲಾಗದೆ ತಾಯಿ ನಾಯಿ ಪಡುತ್ತಿರುವ ಗೋಳು ಹೇಳತೀರದಾಗಿತ್ತು. ಅಲ್ಲಿಯೇ ಪಕ್ಕದಲ್ಲಿದ್ದ ಬೀಡಾ ಅಂಗಡಿಯ ಮಾಲೀಕ ನಾರಾಯಣ ಗೌಡ ಮತ್ತು ಸತೀಶ ನಾಯ್ಕ, ಮಹಾಬಲೇಶ್ವರ ನಾಯಕ, ಮಾರುತಿ ನಾಯಕ, ಮಂಜುನಾಥ ನಾಗೇಕರ್ ಅವರು ಇದನ್ನು ಗಮನಿಸಿ ನಾಯಿಮರಿಗಳ ರಕ್ಷಣೆಗೆ ಮುಂದಾದರು.
ಹಾರೆ, ರಾಡ್‌ಗಳನ್ನು ಬಳಸಿ ಗಟಾರಿನ ಮೇಲೆ ಮುಚ್ಚಿದ ಲಿಂಟಲ್ ತೆಗೆದು ಗಟಾರಿನಲ್ಲಿ ಇಳಿದು ಮೂರು ನಾಯಿಮರಿಗಳನ್ನು ಮೇಲೆತ್ತಿದರು. ಸಾವಿನಂಚಿನಿಂದ ಪಾರಾಗಿ ಬಂದ ನಾಯಿಮರಿಗಳು ತಾಯಿ ನಾಯಿಯ ಮಡಿಲು ಸೇರಿ ಹಾಲು ಕುಡಿಯುತ್ತಿರುವ ದೃಶ್ಯ ಮನಕಲುಕುವಂತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.