ADVERTISEMENT

ಗದ್ದೆ ಜಲಾವೃತ: ರೈತರು ಕಂಗಾಲು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 10:20 IST
Last Updated 8 ಸೆಪ್ಟೆಂಬರ್ 2011, 10:20 IST

ಸಿದ್ದಾಪುರ:  ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲ್ಲೂಕಿನ ಹಾಳದಕಟ್ಟ, ಕೊಂಡ್ಲಿ, ಹಣಜಿಬೈಲ್, ಮುಗದೂರು ಭಾಗದ ಬಹಳಷ್ಟು ಗದ್ದೆಗಳಲ್ಲಿ ನೀರು ತುಂಬಿದ್ದು ರೈತರು ಕಂಗಾಲಾಗಿದ್ದಾರೆ.

ಈ ಗದ್ದೆಗಳಲ್ಲಿ ಎರಡು ವಾರಕ್ಕೂ ಅಧಿಕ ಅವಧಿಯಿಂದ ನೀರು ನಿಂತಿದ್ದು, ಬತ್ತದ ಸಸಿಗಳು ಕೊಳೆಯತೊಡಗಿವೆ. ಹಲವು ರೀತಿಯ ಸಂಕಷ್ಟದ ಮಧ್ಯೆ ಬತ್ತ ಬೆಳೆದು, ವರ್ಷದ ಅನ್ನಕ್ಕೆ ದಾರಿ ಮಾಡಿಕೊಳ್ಳುವ ಆಸೆಯಲ್ಲಿದ್ದ ಈ ಪ್ರದೇಶದ ರೈತರ ಆಸೆಗೆ ಮಳೆ ತಣ್ಣೀರು ಎರಚಿದೆ. 

ಪಟ್ಟಣದಿಂದ ಹಾಳದಕಟ್ಟಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿಯೇ ಇರುವ ಮುರುಗೇಶ ಬಸ್ತಿಕೊಪ್ಪ ಅವರ ಗದ್ದೆ ಕೆರೆಯಂತೆ ಕಾಣುತ್ತಿದ್ದು, ತಿಂಗಳಿಂದೀಚೆಗೆ ನಾಟಿ ಮಾಡಿರುವ ಬತ್ತದ ಸಸಿಗಳು ಕುಡಿಯೊಡೆದು ಚಿಗುರುವ ಮೊದಲೇ ಕೊಳೆಯತೊಡಗಿವೆ.
 
ಅದರಂತೆ ಹಣಜಿಬೈಲಿನ ರಾಮಚಂದ್ರ ತಿಮ್ಮ ನಾಯ್ಕ, ಯಮುನಾ ಲಕ್ಷ್ಮಣ ನಾಯ್ಕ, ವಿಷ್ಣು ನಾಗಾ ನಾಯ್ಕ, ಮುಕುಂದ ಬಂಗಾರ್ಯ ನಾಯ್ಕ, ಪರಶುರಾಮ ಬಂಗಾರ್ಯ ನಾಯ್ಕ, ಮಂಜಾ ತಿಮ್ಮ ನಾಯ್ಕ  ಸೇರಿದಂತೆ ಹೊಳೆಯ ಸಮೀಪದಲ್ಲಿರುವ ಹಲವರ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಮುಗದೂರಿನ ಚಂದ್ರಶೇಖರ ಮಡಿವಾಳ, ಕೃಷ್ಣ ಜಟ್ಯಾ ಮಡಿವಾಳ, ನಾಗೇಶ ಜಟ್ಯಾ ಮಡಿವಾಳ, ಅಣ್ಣಪ್ಪ ಜಟ್ಯಾ ಮಡಿವಾಳ, ಬಂಗಾರ್ಯ ಗಣಪಾ ಮಡಿವಾಳ, ಪರಶುರಾಮ ನಾಯ್ಕ ಮತ್ತಿತರ ಹಲವು ರೈತರ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಮುಗದೂರಿನಲ್ಲಿ ಸುಮಾರು 10 ಎಕರೆಗಿಂತಲೂ ಹೆಚ್ಚು ಪ್ರದೇಶದ ಬತ್ತದ ಗದ್ದೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ ಎನ್ನತ್ತಾರೆ ಮುಗದೂರಿನ ರಾಮಚಂದ್ರ ಮಡಿವಾಳ.

ಪುನಃ ಅಗೆ ಸಸಿಗಳನ್ನು ಬೆಳೆದು, ಈಗ ಬತ್ತದ ಗದ್ದೆಗಳಲ್ಲಿ ನಾಟಿ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡುವ ಮುಗದೂರಿನ ಚಂದ್ರಶೇಖರ ಮಡಿವಾಳ,  ನೀರಿನಲ್ಲಿರುವ ಬತ್ತದ ಬೆಳೆ ಕೈಗೆ ಸಿಗಲಾರದು ಎಂದು ನೊಂದು ನುಡಿಯುತ್ತಾರೆ.

ಮಳೆ ಹೆಚ್ಚಳ:  ಕಳೆದ ಎರಡು ದಿನಗಳಿಂದ ಕೊಂಚ ಕಡಿಮೆಯಾಗಿದ್ದ ಮಳೆ ಈ ರೈತರಲ್ಲಿ ಆಶಾಭಾವನೆಯನ್ನು ಮೂಡಿಸಿತ್ತು. ಆದರೆ ಬುಧವಾರ ಮಧ್ಯಾಹ್ನದ ನಂತರ ಮತ್ತೇ ಮಳೆ ಅಬ್ಬರಿಸತೊಡಗಿದ್ದರಿಂದ ಅವರ ಆಸೆ ಕಮರಿಹೋದಂತಾಗಿದೆ. ಇದೇ ರೀತಿ ಮಳೆ ಮುಂದುವರಿದರೇ ತಕ್ಷಣದಲ್ಲಿಯೇ ಗದ್ದೆಗಳಲ್ಲಿನ ನೀರು ಕಡಿಮೆಯಾಗುವ ಸಾಧ್ಯತೆ ಇಲ್ಲ ಎಂಬುದು ರೈತರ ಅನಿಸಿಕೆ.

ಬುಧವಾರ ಬೆಳಗಿನವರೆಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ  ಪಟ್ಟಣದಲ್ಲಿ 51.2 ಮಿ.ಮೀ. ಸುರಿದಿದ್ದು, ಈ ವರೆಗೆ ಒಟ್ಟು 3271.8 ಮಿ.ಮೀ. ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.