ADVERTISEMENT

ಗುಡ್ಡಗಾಡು ಓಟ: ವಿಜಾಪುರ ಕೃಷಿ ಕಾಲೇಜು ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 8:30 IST
Last Updated 22 ಸೆಪ್ಟೆಂಬರ್ 2011, 8:30 IST

ಶಿರಸಿ : ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಂತರ್ ಕಾಲೇಜ್ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ವಿಜಾಪುರ ಕೃಷಿ ಕಾಲೇಜ್ ಟೀಮ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿದೆ. ಬುಧವಾರ ಇಲ್ಲಿನ ಅರಣ್ಯ ಕಾಲೇಜ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾರವಾಡ ಕೃವಿವಿ ಕುಲಪತಿ ಆರ್. ಆರ್. ಹಂಚಿನಾಳ ಬಹುಮಾನ ವಿತರಿಸಿದರು. ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಧಾರವಾಡ ಕೃಷಿ ಕಾಲೇಜ್ ದ್ವಿತೀಯ, ಶಿರಸಿ ಅರಣ್ಯ ಕಾಲೇಜ್ ತೃತೀಯ ಸ್ಥಾನ ಗಳಿಸಿವೆ.

ಗುಡ್ಡಗಾಡು ಓಟದಲ್ಲಿ ಶಿವಪುತ್ರಪ್ಪ (ಹನುಮನಟ್ಟಿ ಕೃಷಿ ಕಾಲೇಜ್) ಪ್ರಥಮ ಹಾಗೂ ಆನಂದ ಕತ್ತಿ (ವಿಜಾಪುರ ಕೃಷಿ ಕಾಲೇಜ್) ದ್ವಿತೀಯ ಸ್ಥಾನ ಪಡೆದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಉತ್ತಮ ಐದು ವಿಶ್ವವಿದ್ಯಾಲಯಗಳಲ್ಲಿ ಧಾರವಾಡ ಕೃವಿವಿ ಒಂದಾಗಿದ್ದು, ವಿವಿ ವ್ಯಾಪ್ತಿಯಲ್ಲಿ ಸಮವಸ್ತ್ರ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ.

ಧಾರವಾಡ ಕಾಲೇಜಿನಲ್ಲಿ ಪ್ರಥಮವಾಗಿ ಪ್ರಾರಂಭಿಸಲಾಗಿದೆ. ಧಾರವಾಡದಲ್ಲಿ ಇತ್ತೀಚೆಗೆ ನಡೆದ ಕೃಷಿ ಮೇಳ ಅತ್ಯಂತ ಯಶಸ್ಸು ಕಂಡಿದ್ದು, 11ಲಕ್ಷ ಕೃಷಿಕರು ಭಾಗವಹಿಸಿದ್ದರು. ಅಂತರ್‌ರಾಷ್ಟ್ರೀಯ ಮಟ್ಟದ ಮೇಳ ನಡೆಸಲು ಬೇಡಿಕೆ ವ್ಯಕ್ತವಾಗಿದೆ ಎಂದರು.

ಇತ್ತೀಚೆಗೆ ಪ್ರಾರಂಭವಾಗಿರುವ ಹನುಮನಟ್ಟಿ ಕಾಲೇಜಿನ ಸೌಲಭ್ಯ ಹೆಚ್ಚಳಕ್ಕೆ ರೂ.2.5ಕೋಟಿ ನೆರವು ನೀಡಲಾಗಿದೆ ಎಂದರು. ಶಿರಸಿ ಅರಣ್ಯ ಕಾಲೇಜಿಗೆ ಕ್ರೀಡಾ ಸೌಲಭ್ಯ ಮತ್ತು ಸಭಾಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಆದ್ಯತೆ ಮೇಲೆ ಒದಗಿಸಲಾಗುವುದು ಎಂದರು.

ಕೃಷಿ ವಿವಿ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಪ್ರಮೋದ ಬಾಸರಕರ, ಅರಣ್ಯ ಕಾಲೇಜಿನ ಡೀನ್ ಬಿ.ಎಸ್. ಜನಗೌಡರ, ತೋಟಗಾರಿಕಾ ಕಾಲೇಜಿನ ಡೀನ್ ಎನ್.ಬಸವರಾಜು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಸಹ ಪ್ರಾಧ್ಯಾಪಕ ಉಮೇಶ ಮುಕ್ತಾಮಠ ಸ್ವಾಗತಿಸಿದರು. ಪ್ರೊ. ಶಶಿಧರ ಶಿರಹಟ್ಟಿ ವಂದಿಸಿದರು. ಅಂತರ್ ಕಾಲೇಜ್ ಚೆಸ್ ಪಂದ್ಯಾವಳಿ ಸಹ ಕಾಲೇಜಿನಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.