ADVERTISEMENT

ಗುತ್ತಿಗೆದಾರರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 8:30 IST
Last Updated 4 ಫೆಬ್ರುವರಿ 2011, 8:30 IST

ಕುಮಟಾ: ಕಾರವಾರದ ಪಂಚಾಯಿತಿ ರಾಜ್ ಎಂಜಿನಿಯರಿಂಗ್ ವಿಭಾಗದ ಕಚೇರಿಯನ್ನು ಕೋಲಾರಕ್ಕೆ ಸ್ಥಳಾಂತರಿಸುವ ಸರ್ಕಾರದ ಆದೇಶ ವಿರೋಧಿಸಿ ಕುಮಟಾ ಗುತ್ತಿಗೆದಾರರ ಸಂಘದವರು ಗುರುವಾರ ಪ್ರತಿಭಟನೆ ನಡೆಸಿದರು.  ಈ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಾಯಕ ಆಯುಕ್ತರ ಮೂಲಕ ಸಂಘದ ಪದಾಧಿಕಾರಿಗಳು ಮನವಿ ಅರ್ಪಿಸಿತು.

“ಭೌಗೋಳಿಕವಾಗಿ ತುಂಬಾ ವಿಸ್ತಾರವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಡಳಿತ ಹಾಗೂ ಅಭಿವೃದ್ಧಿಗೆ ಅನುಕೂಲವಾಗುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಎಂಜಿನೀಯರಿಂಗ್ ವಿಭಾಗದ ಜೊತೆ ಶಿರಸಿಯಲ್ಲೂ ಹೆಚ್ಚುವರಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಕಚೇರಿ ತೆರೆಯಲಾಗಿತ್ತು. ಆದರೆ ಸರಕಾರದ ಸದ್ಯದ ಆದೇಶ ಪ್ರಕಾರ  ಜಿಲ್ಲಾ ಪಂಚಾಯತಿ ಎಂಜಿನಿಯರಿಂಗ್ ವಿಭಾಗದ ಕಚೇರಿಯನ್ನು ಕೋಲಾರಕ್ಕೆ ಸ್ಥಳಾಂತರಿಸಿ ಅಲ್ಲಿ ಕುಡಿಯುವ ನೀರು ಸರಬರಾಜಿನ ತಾತ್ಕಾಲಿಕ ಸಂಸ್ಥೆಯಾದ ಜಲನಿರ್ಮಲ ಕಚೇರಿ ತೆರೆಯುವ ಪ್ರಯತ್ನಗಳು ನಡೆಯುತ್ತಿವೆ. ಶಿರಸಿಯಲ್ಲಿ ಪಂಚಾಯತ್ ರಾಜ್ ಎಂಜಿನೀಯರಿಂಗ್ ಕಚೇರಿ ಇರುವ ಹಾಗೇ ಜಿಲ್ಲೆಯ ಕರಾವಳಿ ತಾಲ್ಲೂಕುಗಳ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಕಾರವಾರ ಕಚೇರಿಯನ್ನು ಸ್ಥಳಾಂತರಿಸದೇ ಇಲ್ಲೇ ಉಳಿಸಬೇಕು” ಎಂದು ಆಗ್ರಹಿಸಿದರು. 

“ಒಂದೊಮ್ಮೆ  ಸ್ಥಳಾಂತರ ಅನಿವಾರ್ಯವಾದರೆ ಗುತ್ತಿಗೆದಾರ ಸಂಘದವರು ಉಗ್ರ ಹೋರಾಟ ಮಾಡಬೇಕಾಗುವುದು ಅನಿವಾರ್ಯವಾಗುತ್ತದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಸಹಾಯಕ ಆಯುಕ್ತರ ಕಚೇರಿ ಶಿರಸ್ತೇದಾರುಗಳಾದ ಶೇಖ್ ಹಾಗೂ ಕಾಮತ್ ಅವರಿಗೆ ಮನವಿ ಅರ್ಪಿಸಿದರು.  ಗುತ್ತಿಗೆದಾರ ಸಂಘದ ಗಣಪಯ್ಯ ನಾಯ್ಕ, ಅಮಿತ ಶಾನಭಾಗ, ಎಂ.ಎಂ. ಹೆಗಡೆ, ಜಯ ಶೆಟ್ಟಿ, ಗಜು ನಾಯ್ಕ, ಸುಧೀರ್ ಪಂಡಿತ, ದಾಮೋದರ ನಾಯ್ಕ, ಗಣೇಶ ನಾಯ್ಕ ಮೊದಲಾದವರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.