ಯಲ್ಲಾಪುರ: ಮಾವಿನಕಟ್ಟಾದ ಸ್ತ್ರೀಶಕ್ತಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಅಧಿಕಾರಿಗಳ ಅನುಪಸ್ಥಿತಿಯ ಕಾರಣದಿಂದ ಆಕ್ರೋಶಗೊಂಡ ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸಿದರು.
ನಂತರ ನೋಡೆಲ್ ಅಧಿಕಾರಿ ಎಸ್.ಬಿ.ಮರಿಗೋಳಪ್ಪ ಗ್ರಾಮಸ್ಥರನ್ನು ಮನವೊಲಿಸಿ ಸಭೆ ನಡೆಸಲು ಪ್ರಯತ್ನಿಸಿದರಾದರೂ ಕೆಲ ಕಾಲ ನಡೆದ ಸಭೆಯಲ್ಲಿ ಮತ್ತೆ ಸಾರ್ವಜನಿಕರ ಗದ್ದಲ ಹೆಚ್ಚಾಗಿ ಸಭೆ ನಡೆಸಲು ಸಾಧ್ಯವಾಗದೇ ಸಭೆಯನ್ನೇ ಮುಂದೂಡಲಾಯಿತು.
ಬೆಳಿಗ್ಗೆ 10.30 ಕ್ಕೆ ಆರಂಭವಾಗಬೇಕಾದ ಸಭೆಗೆ ಅಧಿಕಾರಿಗಳು 11.30 ರವರೆಗೂ ಬರದಿರುವಾಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕೆಇಬಿ, ತಾ.ಪಂ, ಜಿ.ಪಂ, ಲೋಕೋಪಯೋಗಿ, ಪಶು ಸಂಗೋಪನೆ, ಕೆಎಸ್‌ಆರ್‌ಟಿಸಿ, ಪಂಚಾಯತ್ ರಾಜ್ ಮುಂತಾದ ಪ್ರಮುಖ ಇಲಾಖೆಗಳ ಅಧಿಕಾರಿಗಳು ಹಾಜರಾಗದಿರುವುದು ಅಸಮಾಧಾನಕ್ಕೆ ಕಾರಣವಾಯಿತು. ಸಭೆಯಲ್ಲಿ ನೋಡೆಲ್ ಅಧಿಕಾರಿ ಎಸಿಎಫ್ ಎಸ್.ಬಿ.ಮರಿಗೋಳಪ್ಪನವರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನ್ನಪೂರ್ಣ ವಸ್ತ್ರದ್, ಎನ್‌ಆರ್‌ಇಜಿ ನೋಡಲ್ ಅಧಿಕಾರಿ ಗಿರಿಧರ ನಾಯ್ಕ ಸೇರಿದಂತೆ ಕಂದಾಯ, ಶಿಕ್ಷಣ, ತೋಟಗಾರಿಕೆ ಅಧಿಕಾರಿಗಳು ಮಾತ್ರ ಹಾಜರಾಗಿದ್ದರು.
ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಜಾನ್, `ಸಮಸ್ಯೆಗಳಿಗೆ ಉತ್ತರಿಸಬೇಕಾದ ಅಧಿಕಾರಿಗಳೇ ಬಾರದಿದ್ದರೆ ಸಮಸ್ಯೆಗೆ ಉತ್ತರಿಸುವವರಾರು? ಅಧಿಕಾರಿಗಳಿಗೆ ಗ್ರಾಮಸಭೆಯೆಂದರೆ ನಿರ್ಲಕ್ಷವೇಕೆ?' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳಿವೆ. ಹಿಂದಿನ ಗ್ರಾಮಸಭೆಯಲ್ಲಿ ಹೇಳಿದ ಯಾವೊಂದು ಕೆಲಸವೂ ಅನುಷ್ಠಾನಕ್ಕೆ ಬಂದಿಲ್ಲ. ನಮ್ಮ ಪ್ರಶ್ನೆಗಳಿಗೆ ಉತ್ತರ ಬೇಕು. ಸಮಸ್ಯೆಗಳು ಬಗೆ ಹರಿಯಬೇಕು. ಅಧಿಕಾರಿಗಳು ಬರುವವರೆಗೆ ಗ್ರಾಮಸಭೆ ಮುಂದೂಡುವಂತೆ ಎಂದು ನೋಡಲ್ ಅಧಿಕಾರಿಯವರನ್ನು ಆಗ್ರಹಿಸಿದರು.
ಹೆಸ್ಕಾಂ ಇಲಾಖೆ ಮಾತ್ರ ತಮ್ಮ ಪ್ರತಿನಿಧಿಯಾಗಿ ಸ್ಥಳೀಯ ಲೈನ್‌ಮೆನ್ ಅವರನ್ನೇ ಕಳುಹಿಸಿದ್ದು, ಗ್ರಾಮಸ್ಥರು ಗ್ರಾಮಸಭೆಯ ಔಚಿತ್ಯ ಪ್ರಶ್ನಿಸುವಂತಾಯಿತು,
ಸ್ಥಳೀಯ ಮುಖಂಡ ಮಾದೇವ ನಾಯ್ಕ ಗ್ರಾ.ಪಂ ಅಧ್ಯಕ್ಷರು, ಸದಸ್ಯರು 12 ಬಡ ಫಲಾನುಭವಿಗಳಿಂದ ಮನೆಯ ಸಲುವಾಗಿ ತಲಾ ರೂ 1200 ಪಡೆದಿದ್ದಾರೆಂಬ ದೂರನ್ನು ಹಿಂದಿನ ಗ್ರಾಮಸಭೆಯಲ್ಲಿಯೇ ನೀಡಿದ್ದೇವೆ. ಅದರ ಬಗ್ಗೆ ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಅಧ್ಯಕ್ಷರು ಕ್ರಮ ತೆಗೆದುಕೊಂಡಂತಿಲ್ಲ. ಎಲ್ಲ ಸದಸ್ಯರೂ ಇದರಲ್ಲಿ ಪಾಲುದಾರರಾಗಿದೆ ಎಂದು ಆರೋಪಿಸಿದರು. ಉತ್ತರ ನೀಡುವ ಭರವಸೆ ನೀಡಿದ ಅಧ್ಯಕ್ಷರು ಉತ್ತರಿಸದಿರುವ ಹಿನ್ನೆಲೆಯೇನು ಎಂದು ಪ್ರಶ್ನಿಸಿದರು. `ಅದರ ಬಗ್ಗೆ ಕ್ರಮ ತೆಗೆದುಕೊಂಡಿದ್ದೇವೆ. ಯಾರೋ ಇಬ್ಬರು ಮಾಡಿದ ತಪ್ಪಿಗೆ ಎಲ್ಲರನ್ನೂ ಏಕೆ ದೂಷಿಸುತ್ತೀರಿ' ಎಂದು ಗ್ರಾ.ಪಂ ಸದಸ್ಯ ಶೇಖರ್ ನಾಯ್ಕ ಪ್ರಶ್ನಿಸಿದರು.
ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ನಾಯ್ಕ ನನ್ನ ಅವಧಿಯಲ್ಲಿ ತಾವು ಹಾಗೂ ಸದಸ್ಯರು ಸಾರ್ವಜನಿಕರಿಂದ ಯಾವ ಹಣವನ್ನೂ ಪಡೆದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು. ನೋಡಲ್ ಅಧಿಕಾರಿ ಎಸ್.ಬಿ.ಮರಿಗೋಳಪ್ಪನವರ್ ಮಾತನಾಡಿ ಮುಂದಿನ ಗ್ರಾಮಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಹಾಜರಿರುವಂತೆ ನೋಡಿಕೊಳ್ಳುವ ಭರವಸೆ ನೀಡಿ ಗ್ರಾಮ ಸಭೆಯನ್ನು ಮುಂದೂಡಿದರು. ಗ್ರಾ.ಪಂ. ಸದಸ್ಯರು, 150 ಕ್ಕೂ ಹೆಚ್ಚು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.