ADVERTISEMENT

ಚಿಣ್ಣರ ಜಿಲ್ಲಾ ದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2011, 8:05 IST
Last Updated 21 ನವೆಂಬರ್ 2011, 8:05 IST
ಚಿಣ್ಣರ ಜಿಲ್ಲಾ ದರ್ಶನಕ್ಕೆ ಚಾಲನೆ
ಚಿಣ್ಣರ ಜಿಲ್ಲಾ ದರ್ಶನಕ್ಕೆ ಚಾಲನೆ   

ಶಿರಸಿ: ಸಮವಸ್ತ್ರ ಧರಿಸಿ, ಬಿಳಿ ಟೊಪ್ಪಿ ತೊಟ್ಟ ಮಕ್ಕಳು ಲಗುಬಗೆಯಿಂದ ಬಸ್ ಹತ್ತಿ ಎರಡು ದಿನಗಳ ಪ್ರವಾಸಕ್ಕೆ ಹೊರಟಿದ್ದಾರೆ. ಜಿಲ್ಲೆಯ ಪ್ರಾಕೃತಿಕ ಸೊಬಗು, ಧಾರ್ಮಿಕ-ಐತಿಹಾಸಿಕ ಕ್ಷೇತ್ರ, ಪ್ರವಾಸಿ ತಾಣಗಳನ್ನು ನೋಡಿ ಆನಂದಿಸುವ ಸಂಭ್ರಮ ಅವರದು.

ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ಚಿಣ್ಣರ ಜಿಲ್ಲಾ ದರ್ಶನ, ಮಕ್ಕಳ ಪ್ರವಾಸಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯಲ್ಲಿ ಭಾನುವಾರ ಚಾಲನೆ ನೀಡಿದರು.

ರಾಜ್ಯದಲ್ಲಿ 50 ವಿದ್ಯಾರ್ಥಿಗಳ 2620 ತಂಡಗಳು ಜಿಲ್ಲಾ ದರ್ಶನದಲ್ಲಿ ಪಾಲ್ಗೊಳ್ಳಲಿವೆ. ಸುಮಾರು ಹಿಂದೆ ಕೇವಲ 20 ಸಾವಿರ ವಿದ್ಯಾರ್ಥಿಗಳು ಪ್ರವಾಸದ ಲಾಭ ಪಡೆಯುತ್ತಿದ್ದರು. ಇಂದು ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಸೇರಿದಂತೆ 1.3ಲಕ್ಷ ವಿದ್ಯಾರ್ಥಿಗಳ ಪ್ರವಾಸಕ್ಕೆ ರೂ.6.3ಕೋಟಿ ಅನುದಾನ ಖರ್ಚು ಮಾಡಲಾಗುತ್ತಿದೆ. ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಮಾಹಿತಿ ಹೊಂದಿದ ಜಿಲ್ಲಾ ದರ್ಶನ ಕೈಪಿಡಿ ಸಿದ್ಧಪಡಿಸಲಾಗಿದೆ. ಪ್ರವಾಸಕ್ಕೆ ತೆರಳಿದ ವಿದ್ಯಾರ್ಥಿಗಳು ತಮ್ಮ ಅನುಭವ ದಾಖಲಿಸಬೇಕು ಎಂದರು.

ಮಾರ್ಚ್‌ನಲ್ಲಿ ವಾರ್ಷಿಕ ಪರೀಕ್ಷೆ ನಡೆಯುವದರಿಂದ ಜನೆವರಿ, ಫೆಬ್ರುವರಿ ತಿಂಗಳುಗಳನ್ನು ಅಭ್ಯಾಸಕ್ಕೆ ಮೀಸಲಿಟ್ಟು, ಡಿಸೆಂಬರ್ ತಿಂಗಳ ಕೊನೆಯೊಳಗೆ ಶಾಲಾ ಪ್ರವಾಸ ಪೂರ್ಣಗೊಳಿಸಬೇಕು ಎಂದು ಸಚಿವರ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಚಿವರು ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಟ್ರ್ಯಾಕ್‌ಸೂಟ್ ವಿತರಣೆ ಮಾಡಿದರು.

ಸರ್ವ ಶಿಕ್ಷಾ ಅಭಿಯಾನದ ಚಿಣ್ಣರ ಜಿಲ್ಲಾ ದರ್ಶನ ಕಾರ್ಯಕ್ರಮದ ಅಡಿಯಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಎರಡು ದಿನದ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದರು. ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಯೋಜನೆ ಅಡಿಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ಒಂದು ದಿನದ ಪ್ರವಾಸ ಪೂರೈಸಿದರು. ರಾಜ್ಯದಲ್ಲಿ ಹತ್ತನೇ ತರಗತಿ ಓದುತ್ತಿರುವ ಸರ್ಕಾರಿ ಪ್ರೌಢಶಾಲೆಗಳ 318953 ವಿದ್ಯಾರ್ಥಿಗಳಿಗೆ ರೂ.6.37ಕೋಟಿ ಅನುದಾನ ಮಂಜೂರಿಯಾಗಿದೆ.
 
ಶಿರಸಿ ಶೈಕ್ಷಣಿಕ ಜಿಲ್ಲೆಯ 73 ಪ್ರೌಢಶಾಲೆಗಳ 4341 ಮಕ್ಕಳಿಗೆ ರೂ.8.68ಲಕ್ಷ, ಕಾರವಾರ ಶೈಕ್ಷಣಿಕ ಜಿಲ್ಲೆಯ 49 ಸರ್ಕಾರಿ ಪ್ರೌಢಶಾಲೆಗಳ 2588 ವಿದ್ಯಾರ್ಥಿಗಳಿಗೆ ರೂ.5.17ಲಕ್ಷ ಅನುದಾನ ಬಿಡುಗಡೆಯಾಗಿದೆ.

ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಆಯುಕ್ತ ಬಿ.ವಿ.ಕುಲಕರ್ಣಿ, ನಗರಸಭೆ ಅಧ್ಯಕ್ಷ ರವಿ ಚಂದಾವರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಂಗಲಾ ಭಟ್ಟ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಡಿ.ಹೆಗಡೆ, ಶೋಭಾ ನಾಯ್ಕ, ಸರ್ವ ಶಿಕ್ಷಾ ಅಭಿಯಾನದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ರಾಮಕೃಷ್ಣ ನಾಯಕ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಕೆ.ಶಿವಕುಮಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.