ADVERTISEMENT

ಜಿಲ್ಲಾ ಆಸ್ಪತ್ರೆ ಚಾವಣಿಗೆ ಕಾಯಕಲ್ಪದ ನಿರೀಕ್ಷೆ

ರೋಗಿಗಳು, ಸಿಬ್ಬಂದಿ ಮೇಲೆ ಬೀಳುವ ಕಾಂಕ್ರಿಟ್‌ ತುಣುಕು: ಕಟ್ಟಡದ ಸೂಕ್ತ ನಿರ್ವಹಣೆಗೆ ಆಗ್ರಹ

ಸದಾಶಿವ ಎಂ.ಎಸ್‌.
Published 5 ಮಾರ್ಚ್ 2018, 9:50 IST
Last Updated 5 ಮಾರ್ಚ್ 2018, 9:50 IST

ಕಾರವಾರ: ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಗಳ ವಾರ್ಡ್‌ನ ಚಾವಣಿ ಶಿಥಿಲಗೊಂಡಿದ್ದು, ಒಳಗೆ ಅಳವಡಿಸಿದ್ದ ಕಬ್ಬಿಣದ ಸರಳು ಕಾಣಿಸುತ್ತಿದೆ. ಆಗಾಗ ಚಕ್ಕೆ ಬೀಳುತ್ತಿದೆ. ಇದರಿಂದ ರೋಗಿಗಳು ಮತ್ತು ಸಿಬ್ಬಂದಿ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.

‘ಸುಮಾರು 40 ವರ್ಷಗಳಷ್ಟು ಹಿಂದಿನ ಈ ಕಟ್ಟಡದ ಬಹುತೇಕ ವಾರ್ಡ್‌ಗಳಲ್ಲಿ ಇದೇ ಪರಿಸ್ಥಿತಿಯಿದೆ.ರೋಗಿಗಳು ಮಲಗಿರುವ ಹಾಸಿಗೆಯಿಂದ ಮೇಲೆ ನೋಡಿದರೆ ಒಡೆದಿರುವ ಚಾವಣಿ ಕಾಣುತ್ತದೆ. ಯಾವಾಗ ಚಕ್ಕೆಗಳು ಮೇಲೆ ಬೀಳುತ್ತವೆಯೋ ಭಯವಾಗುತ್ತದೆ. ದುರಸ್ತಿ ಮಾಡಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ನೆಲಮಹಡಿಯಲ್ಲಿರುವ ಮಹಿಳಾ ಒಳರೋಗಿಗಳ ವಿಭಾಗ, ಮೊದಲ ಮಹಡಿಯಲ್ಲಿರುವ ಮಕ್ಕಳ ಪುನಶ್ಚೇತನ ಘಟಕದ ವಾರ್ಡ್, ಪುರುಷರ ಚಿಕಿತ್ಸಾ ವಿಭಾಗದಲ್ಲಿ ಚಾವಣಿಗಳ ಪರಿಸ್ಥಿತಿ ಇದೇ ರೀತಿಯಿದೆ.

ADVERTISEMENT

ನಿರ್ವಹಣೆ ಸೂಕ್ತವಾಗಿಲ್ಲ: ‘ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯಡಿ (ಕೆಎಚ್‌ಎಸ್‌ಡಿಪಿಆರ್‌ಪಿ) ಆಸ್ಪತ್ರೆಯನ್ನು ಈ ಹಿಂದೆ ದುರಸ್ತಿ ಮಾಡಲಾಗಿತ್ತು. ಆದರೆ, ಕಾಟಾಚಾರಕ್ಕೆ ಕಾಮಗಾರಿ ಕೈಗೊಳ್ಳಲಾಗಿದೆ. ಜಿಲ್ಲಾಡಳಿತ ಮತ್ತು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಾಮ್ಸ್) ಮೂಲ ಸೌಕರ್ಯ ಅಭಿವೃದ್ಧಿಗೆ ಗಮನ ಹರಿಸಬೇಕಿತ್ತು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ಅಸಮಾಧಾನ ವ್ಯಕ್ತಪಡಿಸುತ್ತಾರೆ. ‘ಸಾವಿರಾರು ಬಡ ಜನರು ಜಿಲ್ಲಾ ಆಸ್ಪತ್ರೆಯಿಂದಾಗಿ ಗುಣಮುಖರಾಗಿ ಜೀವನ ನಡೆಸುತ್ತಿದ್ದಾರೆ. ಈ ಸೇವೆ ಇನ್ನೂ ಲಕ್ಷಾಂತರ ಮಂದಿಗೆ ಸಿಗುವಂತಾಗಬೇಕು’ ಎನ್ನುತ್ತಾರೆ ಅವರು.

‘ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಆರೋಗ್ಯ ನೋಡಿಕೊಳ್ಳುವುದೇ ಸವಾಲಾಗಿರುತ್ತದೆ. ಅದರ ನಡುವೆ ಸಿಮೆಂಟ್ ಪುಡಿ, ಚಕ್ಕೆ ಮೇಲಿನಿಂದ ಬಿದ್ದರೆ ಅವರ ಪರಿಸ್ಥಿತಿ ಏನಾಗಬೇಡ? ಚರ್ಮದ ಅಲರ್ಜಿ, ಆಸ್ತಮಾದಿಂದ ಬಳಲುತ್ತಿರುವವವರು, ಗಾಯಾಳುಗಳಿಗಂತೂ ಇದು ತುಂಬಾ ಅಪಾಯಕಾರಿ. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆ. ಆದರೆ, ಕಟ್ಟಡದ ನಿರ್ವಹಣೆ ಬಗ್ಗೆ ಯಾಕೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಿಳಿಯುತ್ತಿಲ್ಲ. ಚಾವಣಿಯ ದುರಸ್ತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ರೋಗಿಯೊಬ್ಬರ ಸಂಬಂಧಿ ಮಂಜುನಾಥ ಒತ್ತಾಯಿಸುತ್ತಾರೆ.

‘ಕಬ್ಬಿಣದ ತಗಡು ಅಳವಡಿಕೆ’

‘ಹಳೆಯ ಕಟ್ಟಡವಾದ ಕಾರಣ ಚಾವಣಿಯಲ್ಲಿ ಕಾಂಕ್ರೀಟ್ ಒಡೆಯುತ್ತಿದೆ. ಅದು ರೋಗಿಗಳು ಮತ್ತು ಸಿಬ್ಬಂದಿ ಮೇಲೆ ಬೀಳುವುದನ್ನು ತಡೆಯಲು ಕಬ್ಬಿಣದ ತಗಡನ್ನು ಅಳವಡಿಸಲು ಉದ್ದೇಶಿಸಿದ್ದೇವೆ. ಇದಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದ್ದು, ಸರ್ಕಾರದಿಂದ ಅನುಮೋದನೆ ಸಿಕ್ಕಿದ ಕೂಡಲೇ ದುರಸ್ತಿ ಮಾಡಲಾಗುವುದು’ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಕುಡ್ತಲ್ಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

*

ಕರಾವಳಿಯಲ್ಲಿ ಬೀಸುವ ಗಾಳಿಯಲ್ಲಿ ಉಪ್ಪಿನ ಅಂಶ ಇರುವ ಕಾರಣ ಕಟ್ಟಡಗಳ ಬಾಳಿಕೆ ಕಡಿಮೆಯಿರುತ್ತದೆ. ನಿರ್ವಹಣೆ ಮಾಡದಿದ್ದರೆ ತೊಂದರೆ ಆಗುತ್ತದೆ.

–ಮಾಧವ ನಾಯ್ಕ, ಜನಶಕ್ತಿ ವೇದಿಕೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.