ADVERTISEMENT

ಜಿಲ್ಲೆಯ ಒಂಬತ್ತು ಮಂದಿ ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 11:04 IST
Last Updated 19 ಜೂನ್ 2013, 11:04 IST

ಕಾರವಾರ/ಭಟ್ಕಳ: ಹಿಮಾಲಯದ ತಪ್ಪಲಿನಲ್ಲಿರುವ ಕೇದಾರನಾಥ ಯಾತ್ರೆಗೆ ಹೋಗಿರುವ ಜಿಲ್ಲೆಯ ಒಂಬತ್ತು ಮಂದಿ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಈ ಕುರಿತು ಯಾತ್ರಾರ್ಥಿಗಳ ತಂಡದಲ್ಲಿರುವ ಭಟ್ಕಳ ತಾಲ್ಲೂಕು ಸಂಪನ್ಮೂಲ ಕೇಂದ್ರದ ಸಂಯೋಜಕ ವಿ.ಡಿ.ಮೊಗೇರ ಮಾಹಿತಿ ನೀಡಿದ್ದಾರೆ.

ಜಗದೀಶ ಪಾಂಡುರಂಗ ಮೇಸ್ತ, ಕೃಷ್ಣಕುಮಾರ ಲಕ್ಷ್ಮಣ ಶೇಟ್, ಪ್ರಹ್ಲಾದ್ ವಿಠ್ಠಲ ಭಟ್, ಕೃಷ್ಣ ಪರಮೇಶ್ವರ ಮಿರಾಶಿ, ತಿಮ್ಮಯ್ಯ ಪರಮೇಶ್ವರ ಮಿರಾಶಿ,  ರಾಘವೇಂದ್ರ ಸುರೇಶ ಭಟ್, ನಿತೀನ್ ರಾಮದಾಸ ಶೇಟ್, ಸೂರಜ್ ಸುರೇಶ ಶಾನಬಾಗ ತಂಡದ್ದಲ್ಲಿದ್ದು ಎಲ್ಲರೂ ಹೊನ್ನಾವರದವರು.

ಕೇದಾರನಾಥ ಸಮೀಪದ ಮನ್ ಕಟಿಯಾರ್‌ನಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಯಾತ್ರಾರ್ಥಿಗಳು ಕಟಿಯಾರ್‌ನಲ್ಲಿರುವ ಪರ್ವತ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ದೇಶದ ವಿವಿಧ ಭಾಗಗಳಿಂದ ಬಂದಿರುವ ಸುಮಾರು 150 ಯಾತ್ರಾರ್ಥಿಗಳು ತಮ್ಮಂದಿಗೆ ಇದ್ದಾರೆ ಎಂದು ಮೊಗೇರ ತಿಳಿಸಿದ್ದಾರೆ.

ಈ ಪರ್ವತದಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ಗಳು ಸುಮಾರು 4ರಿಂದ5 ಬಾರಿ ಸ್ಥಳಕ್ಕೆ ತೆರಳಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಹಿಂದಕ್ಕೆ ಮರಳಿತು.

ಎರಡು ದಿನಗಳಿಂದ ಉಪವಾಸವಿದ್ದು ಮಂಗಳವಾರ 4ರ ಸುಮಾರಿಗೆ ಆಹಾರದ ಪೊಟ್ಟಣಗಳನ್ನು ಒದಗಿಸಲಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಸಂಜೆಯ ನಂತರ ಗಂಗಾ ನದಿಗೆ ಬಂದಿರುವ ಪ್ರವಾವ ಕಡಿಮೆಯಾಗಿದ್ದು ಎಲ್ಲ ಯಾತ್ರಾರ್ಥಿಗಳನ್ನು ಶೀಘ್ರವೇ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಮೊಗೇರ್ ಮಾಹಿತಿ ನೀಡಿದ್ದಾರೆ.

ಹೃಷಿಕೇಶದಲ್ಲೂ ಪ್ರವಾಹ ಬಂದಿದ್ದು ಭಟ್ಕಳದ ಗಣೇಶ ಸಿಂಗ್ ಸಹೋದರರು ಅಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ತಾವು ಸುರಕ್ಷಿತವಾಗಿರುವುದಾಗಿ ಅವರು ತಿಳಿಸಿದ್ದಾರೆ.

ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಜಿಲ್ಲೆಗೆ ಕರೆತರಲು ಜಿಲ್ಲಾಡಳಿತ ಅಲ್ಲಿಯ ಜಿಲ್ಲಾಡಳಿತೊಂದಿಗೆ ಸಂಪರ್ಕದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.