ಕಾರವಾರ: ಚಾರಧಾಮ್ ಯಾತ್ರೆಗೆ ಹೋಗಿ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿರುವ ಜಿಲ್ಲೆಯ ಒಂಬತ್ತು ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ಗುರುವಾರ `ಪ್ರಜಾವಾಣಿ'ಗೆ ತಿಳಿಸಿವೆ.
ಕೇದಾರನಾಥ ಸಮೀಪ ಮನುಕಟಿಯಾರ್ ಪರ್ವತ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 200ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಣಾ ಪಡೆಯ ಯೋಧರು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದಿದ್ದಾರೆ ಎಂದು ಗೊತ್ತಾಗಿದೆ.
ಕೇದಾರನಾಥ ಸುತ್ತಮುತ್ತಲು ಭೂಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿದುಹೋಗಿದ್ದರಿಂದ ಯಾತ್ರಾರ್ಥಿಗಳನ್ನು ಕೇಂದ್ರ ಸ್ಥಾನಕ್ಕೆ ಕರೆತರಲು ಸಾಧ್ಯವಾಗುತ್ತಿಲ್ಲ. ರಸ್ತೆ ದುರಸ್ತಿಕಾರ್ಯ ನಡೆಯುತ್ತಿದ್ದು ಒಂದೆರಡು ದಿನದೊಳಗೆ ಯಾತ್ರಾರ್ಥಿಗಳು ಕೇಂದ್ರ ಸ್ಥಾನಕ್ಕೆ ಬರಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜಿಲ್ಲೆಯ ಒಂಬತ್ತು ಯಾತ್ರಾರ್ಥಿಗಳ ಬಳಿಯಿದ್ದ ಮೊಬೈಲ್ ಫೋನ್‌ಗಳು ಸ್ವೀಚ್ಡ್ ಆಫ್ ಆಗಿದ್ದರಿಂದ ಅವರೊಂದಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ.
ಪರಿಸ್ಥಿತಿ ಭಯಾನಕ: ಅಲಕನಂದಾ, ಮಂದಾಕಿನಿ, ಬಾಗೀರಥಿ ಮತ್ತು ಗಂಗಾ ನದಿ ಉಕ್ಕಿ ಹರಿದಿದ್ದರಿಂದ ಹೃಷಿಕೇಶ, ಕೇದರಾನಾಥ, ಬದರೀನಾಥದಲ್ಲಿ ಪರಿಸ್ಥಿತಿ ಭಯಾನಕವಾಗಿದೆ ಎಂದು ಸಂತ್ರಸ್ತರ ನೆರವಿಗೆ ಧಾವಿಸಿರುವ ಇಲ್ಲಿಯ ಪತಂಜಲಿ ಯೋಗ ಪೀಠದ ಪ್ರಮುಖ ಬಿ.ಜಿ.ಮೋಹನ ಹೇಳಿದ್ದಾರೆ.
ಹೃಷಕೇಶದಿಂದ ದೂರವಾಣಿಯಲ್ಲಿ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, ಪ್ರವಾಹ ಬಂದಿದ್ದರಿಂದ ನದಿ ಹರಿವ ಮಟ್ಟಕ್ಕಿಂತ ಸುಮಾರು 5ರಿಂದ 6 ಮೀಟರ್ ಎತ್ತರದಲ್ಲಿ ಹರಿದಿದೆ. ನೀರಿನ ರಭಸ ಎಷ್ಟಿತ್ತೆಂದರೆ ದಾರಿಯಲ್ಲಿ ಸಿಕ್ಕ ಮನೆ, ಕಟ್ಟಡಗಳೆಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ.
ಕೆಸರಿನಡಿ ಹೂತುಹೋದವರು, ಕಟ್ಟಡದಲ್ಲಿದ್ದು ಸೆಳೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋದ ಯಾತ್ರಾರ್ಥಿಗಳ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ ಎಂದು ಅಲ್ಲಿಯ ಚಿತ್ರಣವನ್ನು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.