ADVERTISEMENT

ಜಿಲ್ಲೆಯ 125 ಕೆರೆ ಶೀಘ್ರವೇ ಸುಧಾರಣೆ: ಕಾಗೇರಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 8:45 IST
Last Updated 12 ಮಾರ್ಚ್ 2011, 8:45 IST
ಜಿಲ್ಲೆಯ 125 ಕೆರೆ ಶೀಘ್ರವೇ ಸುಧಾರಣೆ: ಕಾಗೇರಿ
ಜಿಲ್ಲೆಯ 125 ಕೆರೆ ಶೀಘ್ರವೇ ಸುಧಾರಣೆ: ಕಾಗೇರಿ   

ಸಿದ್ದಾಪುರ: ‘ಜಿಲ್ಲೆಯ 125 ಕೆರೆಗಳನ್ನು ಸುಮಾರು ರೂ. 30 ಕೋಟಿ ವೆಚ್ಚದಲ್ಲಿ ಸುಧಾರಣೆಗೊಳಿಸುವ ಯೋಜನೆ ಸದ್ಯವೇ ಪ್ರಾರಂಭವಾಗಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದರು. ತಾಲ್ಲೂಕಿನ ಬೇಡ್ಕಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧವಾಗುತ್ತಿದೆ. ಸಿದ್ದಾಪುರ ತಾಲ್ಲೂಕಿನಲ್ಲಿಯೂ ಸುಮಾರು ರೂ. 2 ಕೋಟಿ ವೆಚ್ಚದಲ್ಲಿ ಕೆರೆಗಳನ್ನು ಹೂಳೆತ್ತುವ ಮತ್ತು ಸುಧಾರಣೆ ಮಾಡುವ  ಕಾಮಗಾರಿ ಕೈಗೊಳ್ಳಲಾಗುವುದು ಎಂದರು.ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಿಸುವ ಸಲುವಾಗಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ತಾಲ್ಲೂಕಿನ ಬೇಡ್ಕಣಿಯಲ್ಲಿ  ಕುಡಿಯುವ ನೀರಿನ ಸಮಸ್ಯೆಯಿದೆ. ಆದ್ದರಿಂದ ಈ ಶಾಶ್ವತ ನೀರಾವರಿ ಯೋಜನೆಯಡಿಯಲ್ಲಿ ಇಲ್ಲಿಯೂ ಆದ್ಯತೆಯ ಮೇರೆಗೆ ಕಾಮಗಾರಿ ಮಾಡಲಾಗುತ್ತದೆ ಎಂದರು.

‘ತಾಲ್ಲೂಕಿನ ಎಲ್ಲ ಶಾಲೆಗಳ ಎಸ್‌ಡಿಎಂಸಿಗಳು ತಮಗೆ ನೀಡಲಾಗಿರುವ ಎಲ್ಲ ಅನುದಾನವನ್ನು (ಈ ವರ್ಷದ ಅನುದಾನ ಮತ್ತು ದತ್ತಿನಿಧಿ ಮತ್ತಿತರ ಹಣವನ್ನು ಹೊರತುಪಡಿಸಿ) ಬಿಡುಗಡೆ ಮಾಡಲಾಗಿರುವ ಕಾಮಗಾರಿಗಾಗಿ ಉಪಯೋಗಿಸುವ ಮೂಲಕ ಖರ್ಚು ಮಾಡಬೇಕು. ಬರುವ ಶೈಕ್ಷಣಿಕ ವರ್ಷದ ಪ್ರಾರಂಭದ ಹೊತ್ತಿಗೆ ಯಾವುದೇ ಎಸ್‌ಡಿಎಂಸಿಯಲ್ಲಿ ಅನುದಾನ ಖರ್ಚಾಗದೇ ಉಳಿದಿದ್ದರೇ ಅದನ್ನು ಸರ್ಕಾರ ವಾಪಸು ಪಡೆಯುತ್ತದೆ’ ಎಂದರು.

ಕನ್ನಡ ಸಮ್ಮೇಳನ: ‘ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನವು ನಮ್ಮ ಕನ್ನಡತನ ಮತ್ತು ಸಂಸ್ಕೃತಿಯನ್ನು ಜಾಗೃತಗೊಳಿಸಲಿ’ ಎಂದು ಸಚಿವರು ಹಾರೈಸಿದರು.ಜಿ.ಪಂ. ಸದಸ್ಯೆ ಕಮಲಾ ನಾಯ್ಕ, ತಾ.ಪಂ. ಉಪಾಧ್ಯಕ್ಷ ಪ್ರಸನ್ನ ಹೆಗಡೆ, ಸದಸ್ಯ ಬಶೀರ್ ಸಾಬ್, ಬೇಡ್ಕಣಿ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ ಪಾಂಡುರಂಗ ನಾಯ್ಕ, ಉಪಾಧ್ಯಕ್ಷ ಜಿ.ಕೆ.ನಾಯ್ಕ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ. ಅಧ್ಯಕ್ಷೆ ಶಾಂತಿ ಹಸ್ಲರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ರಮಾಬಾಯಿ ವೈದ್ಯ ಸ್ವಾಗತಿಸಿದರು. ಎಸ್‌ಡಿಎಂಸಿ  ಸದಸ್ಯ ಸಿ.ಎನ್. ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಪಟಗಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.