ADVERTISEMENT

ಜೀವವೈವಿಧ್ಯದ ತಾಣ ಕಾಳಿ ಕಣಿವೆ ನಾಳೆ ಸಭೆ; ವೃಕ್ಷಾರೋಪಣ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 9:35 IST
Last Updated 16 ಜೂನ್ 2012, 9:35 IST
ಜೀವವೈವಿಧ್ಯದ ತಾಣ ಕಾಳಿ ಕಣಿವೆ ನಾಳೆ ಸಭೆ; ವೃಕ್ಷಾರೋಪಣ
ಜೀವವೈವಿಧ್ಯದ ತಾಣ ಕಾಳಿ ಕಣಿವೆ ನಾಳೆ ಸಭೆ; ವೃಕ್ಷಾರೋಪಣ   

ಕಾರವಾರ: ಕಾಳಿಕಣಿವೆಯ ಅರಣ್ಯ, ಜೀವವೈವಿಧ್ಯ ಪರಿಸ್ಥಿತಿ, ಜನರ ಆರೋಗ್ಯ ಪರಿಸ್ಥಿತಿ, ನದಿ ಮಾಲಿನ್ಯ ಹೀಗೆ ಕಾಳಿ ಕಣಿವೆ ಪರಿಸರದ ಸಮಗ್ರ ಅವಲೋಕನ ನಡೆಸುವ ಉದ್ದೇಶದಿಂದ ಪಶ್ಚಿಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ, ಜಿಲ್ಲಾ ವಿಜ್ಞಾನ ಕೇಂದ್ರ ಮತ್ತು ಜಿಲ್ಲಾ ಪರಿಸರ ಸಮಿತಿ ಆಶ್ರಯದಲ್ಲಿ ಜೂ. 17ರಂದು ತಾಲ್ಲೂಕಿನ ಕೆರವಡಿಯಲ್ಲಿ ಸಭೆ ನಡೆಯಲಿದೆ.

ಇದೇ ಸಂದರ್ಭದಲ್ಲಿ ವೃಕ್ಷಾರೋಪಣ ಸಮಾರಂಭವೂ ನಡೆಯಲಿದೆ. ಸೋಂದಾ ಸ್ವರ್ಣವಲ್ಲಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮೀನುಗಾರಿಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ರಾಜ್ಯ ಜೈವಿಕ ಇಂಧನ ಮಂಡಳಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸದ್ದಾರೆ.ಕಾಳಿ ಕಣಿವೆಯ ಮಹತ್ವ: ಕಾಳಿಕಣಿವೆ ಜೀವವೈವಿಧ್ಯತೆಗೆ ಹೆಸರಾಗಿದೆ. ಇಲ್ಲಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ ಇದೆ. ಬೃಹತ್ ಯೋಜನೆಗಳು ಕಾಳಿ ಕಣಿವೆಯಲ್ಲಿ ನೆಲೆಯೂರಿವೆ. ಜಲವಿದ್ಯುತ್ ಯೋಜನೆಗಳಿಗೆ ಕಣಿವೆಯ ದಟ್ಟಾರಣ್ಯಗಳನ್ನು ಕಳೆದುಕೊಂಡಿದೆ.

ದಾಂಡೇಲಿಯ ಕಾಗದ ಕಾರ್ಖಾನೆ ಮಾಲಿನ್ಯ ಕಾಳಿನದಿಯನ್ನು ಮಲೀನಗೊಳಿಸಿದೆ. ಈ ಕುರಿತು ಹಲವಾರು ಸಂಶೋಧನಾ ವರದಿಗಳು ಪ್ರಕಟವಾಗಿದೆ. ಪಶ್ಚಿಮಘಟ್ಟ ಕಾರ್ಯಪಡೆಯೂ ವರದಿ ನೀಡಿದೆ. ಆದರೆ ಯಾವುದು ಪ್ರಯೋಜನಕ್ಕೆ ಬಾರದಂತಾಗಿದೆ.

ಕಾಳಿ ನದಿ ದಡದಲ್ಲಿ ಕೈಗಾ ಪರಮಾಣು ವಿದ್ಯುತ್ ಸ್ಥಾವರವಿದ್ದು ಈ ಸ್ಥಾವರದ ಸುತ್ತಮುತ್ತಲ ಹಳ್ಳಿಗಳಲ್ಲಿ ವಾಸವಿರುವ ಜನರಲ್ಲಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮಂಬೈನ ಟಾಟಾ ಸಂಶೋಧನಾ ಸಂಸ್ಥೆ ಮತ್ತು ಮಣಿಪಾಲದ ಕೆಎಮ್‌ಸಿ ಆಸ್ಪತ್ರೆ ಆರೋಗ್ಯ ಸಮೀಕ್ಷೆ ಕೈಗೊಂಡಿದೆ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.