ADVERTISEMENT

`ತಂಬಾಕು ಸೇವನೆಯಿಂದ ಆಯಸ್ಸು ಕ್ಷೀಣ'

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 8:21 IST
Last Updated 1 ಜುಲೈ 2013, 8:21 IST

ಶಿರಸಿ: `ತಂಬಾಕು ಉತ್ಪನ್ನ ಸೇವನೆಯಿಂದ ಮನುಷ್ಯ ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಾನೆ' ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಚೆನ್ನಕೇಶವ ಎನ್.ಆರ್. ಹೇಳಿದರು.

ಶನಿವಾರ ಇಲ್ಲಿನ ಎಂಇಎಸ್ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಡರ್ನ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ಮಾತನಾಡಿ, `ದುಶ್ಚಟಕ್ಕೆ ಬಲಿಯಾಗುತ್ತಿರುವ ಯುವ ಜನರನ್ನು ನಿಯಂತ್ರಿಸುವ ಜವಾಬ್ದಾರಿ ಪಾಲಕರ ಮೇಲಿದೆ' ಎಂದರು.  `ಪ್ರತಿ ವರ್ಷ ತಂಬಾಕು ಸೇವನೆಯಿಂದ ಪ್ರಪಂಚದಲ್ಲಿ ಸಾಯುವ 60 ಲಕ್ಷ ಜನರಲ್ಲಿ 10 ಲಕ್ಷ ಜನ ಭಾರತೀಯರಾಗಿದ್ದಾರೆ.

ತಂಬಾಕು ಸೇವನೆ ಇದೇ ರೀತಿ ಮುಂದುವರಿದರೆ ಪ್ರಪಂಚದಲ್ಲಿ ವರ್ಷಕ್ಕೆ 80 ಲಕ್ಷ ಜನರು ಸಾಯುತ್ತಾರೆ' ಎಂದು ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದರು. ತಂಬಾಕು ಸೇವನೆ ಹಾಗೂ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದ ಡಾ. ಕೃಷ್ಣಮೂರ್ತಿ ರಾಯ್ಸದ ಮಾತನಾಡಿ, `ರಾಜ್ಯದಲ್ಲಿ 2 ಕೋಟಿ ಜನ ತಂಬಾಕಿನ ಚಟ ಹೊಂದಿದ್ದು, ಶೇ 11.9ರಷ್ಟು ಧೂಮಪಾನಿಗಳಾಗಿದ್ದಾರೆ. ತಂಬಾಕು ಸೇವನೆ ದುಷ್ಪರಿಣಾಮದಿಂದ ಜಗತ್ತಿನಲ್ಲಿ ಪ್ರತಿದಿನ ಸುಮಾರು 2,500 ಜನ ಸಾಯುತ್ತಾರೆ. ತಂಬಾಕು ಸೇವನೆಯಿಂದ ಮನುಷ್ಯನ ಆಯುಷ್ಯ 10 ವರ್ಷ ಕ್ಷೀಣಿಸುತ್ತದೆ' ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹಾಬಲೇಶ್ವರ ಹೆಗಡೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಗಣಪತಿ ಭಟ್ಟ ಸ್ವಾಗತಿಸಿದರು. ಬಸವರಾಜ ದೊಡ್ಮನಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.