ADVERTISEMENT

ತವರಿನಲ್ಲಿ ಹೆಗಡೆ ಮೊಮ್ಮಗನ ಅದೃಷ್ಟ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 7:11 IST
Last Updated 26 ಏಪ್ರಿಲ್ 2013, 7:11 IST

ಸಿದ್ದಾಪುರ: `ಪುಟ್ಟ ಹಳ್ಳಿಯಲ್ಲಿ ಹುಟ್ಟಿ ದೊಡ್ಡ ನಾಯಕ'ನಾಗಿ ಬೆಳೆದ ರಾಮಕೃಷ್ಣ ಹೆಗಡೆ ಅವರ ಹೆಸರು ಶಿರಸಿ-ಸಿದ್ದಾಪುರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಹೆಚ್ಚು  ಕೇಳಿಬರತೊಡಗಿದೆ. ರಾಮಕೃಷ್ಣ ಹೆಗಡೆ ಅವರ ಮೊಮ್ಮಗ ಶಶಿಭೂಷಣ ಹೆಗಡೆ ಮೊದಲ ಬಾರಿ ತವರಿನಲ್ಲಿ  ಅದೃಷ್ಟ ಪರೀಕ್ಷೆ ನಡೆಸಿರುವುದು ಇದಕ್ಕೆ ಮುಖ್ಯ ಕಾರಣ.

ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಚುನಾವಣೆಯ ತಮ್ಮ ಮನವಿ ಪತ್ರದಲ್ಲಿ  ಸಹಜವಾಗಿಯೇ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಅದರೊಂದಿಗೆ ರಾಮಕೃಷ್ಣ ಹೆಗಡೆ ಅವರು ಕಟ್ಟಿದ ಜೆಡಿ(ಯು) ಪಕ್ಷವೂ ಮತದಾರರ ಮುಂದೆ ಕಾಣಿಸಿಕೊಂಡಿದೆ. ಪಟ್ಟಣದಲ್ಲಿರುವ ಜೆಡಿಎಸ್  ಕಾರ್ಯಾಲಯದಲ್ಲಿಯೂ ರಾಮಕೃಷ್ಣ ಹೆಗಡೆ ಅವರ ಭಾವಚಿತ್ರವಿದ್ದರೆ, ಜೆಡಿ(ಯು) ಕಾರ್ಯಾಲಯದ ನಾಲಫಲಕದಲ್ಲಿಯೂ ಹೆಗಡೆ ಕಾಣಿಸಿಕೊಂಡಿದ್ದಾರೆ.

`ನಾವು ರಾಮಕೃಷ್ಣ ಹೆಗಡೆ ಅವರ ಭಾವಚಿತ್ರದಡಿಯಲ್ಲಿಯೇ ಪಕ್ಷ ಬೆಳೆಸಲು ಇಚ್ಛಿಸಿದ್ದೇವೆ. ನಮ್ಮದು ಹೆಗಡೆ ಅವರು ಹುಟ್ಟುಹಾಕಿರುವ ಮತ್ತು ಅವರು  ಇದ್ದ ಪಕ್ಷ ` ಎನ್ನುವ ಜೆಡಿ(ಯು) ಪಕ್ಷದ ಜಿಲ್ಲಾ ಘಟಕದ ಸಂಚಾಲಕ ವಸಂತ ಗಣಪತಿ ಹೆಗಡೆ, ತಮ್ಮ ಪಕ್ಷ ಬಿಟ್ಟರೆ ಬೇರೆಯವರು ರಾಮಕೃಷ್ಣ ಹೆಗಡೆ ಅವರ ಭಾವಚಿತ್ರ ಹಾಕಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಆರ್.ನಾಯ್ಕ ಹೆಗ್ಗಾರಕೈ, ಜಿಲ್ಲೆಯ ಮೂವರು ಪ್ರಭಾವಿ ಶಕ್ತಿಗಳಾದ ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ ಮತ್ತು ದೇವೆಗೌಡರ ಅನುಯಾಯಿಗಳು ಒಂದಾಗಿರುವುದರಿಂದ ಜೆಡಿಎಸ್‌ಗೆ ಗೆಲುವು ನಿಶ್ಚಿತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಎರಡೂ ಪಕ್ಷಗಳು `ಆರ‌್ಕೆ ಹೆಗಡೆ' ಅವರನ್ನು ಚುನಾವಣೆಯ ಶಕ್ತಿಯಾಗಿ  ಪರಿಗಣಿಸಿರುವುದನ್ನು ಇದು ಸ್ಪಷ್ಟಪಡಿಸುತ್ತದೆ.ತಾಲ್ಲೂಕಿನ ಮೂಲೆಯಲ್ಲಿರುವ ದೊಡ್ಮನೆ ಎಂಬ ಹಳ್ಳಿಯಲ್ಲಿ ಹುಟ್ಟಿದ ರಾಮಕೃಷ್ಣ ಹೆಗಡೆ, 1957ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ನಂತರ 2004ರಲ್ಲಿ ನಿಧನರಾಗುವವರೆಗೂ ಹಲವು ರೀತಿಯ ರಾಜಕೀಯ ಏರಿಳಿತಗಳನ್ನು ಕಂಡಿದ್ದರು.

ಆದರೂ ಅವರು ಜಿಲ್ಲೆಯ ಅತ್ಯಂತ ಪ್ರಭಾವಿ ನಾಯಕರಾಗಿಯೇ ಇದ್ದವರು. ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ  ಚತುರ ರಾಜಕಾರಣಿ ಹೆಗಡೆ, ತೌರಿಗೆ ಬಂದಾಗ ತಮ್ಮ ಸಹೋದರ ದಿ.ಗಣೇಶ ಹೆಗಡೆ ಅವರ ಮನೆಯಲ್ಲಿಯೇ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುವ ಪರಿಪಾಠ ಹೊಂದಿದ್ದರು. ಆದರೆ ಅವರು 2004ರಲ್ಲಿ ನಿಧನರಾದಾಗ ಹೆಗಡೆ ಅಭಿಮಾನಿಗಳಲ್ಲಿ ಶೂನ್ಯ ಕವಿಯಿತು. ಆ ಸಂದರ್ಭದಲ್ಲಿಯೆ ದಿ.ಗಣೇಶ ಹೆಗಡೆ ಅವರ ಮೊಮ್ಮಗ ಶಶಿಭೂಷಣ ಹೆಗಡೆ ಅವರಲ್ಲಿ ಆರ‌್ಕೆ ಹೆಗಡೆ ಅವರ ರಾಜಕೀಯ ಉತ್ತರಾಧಿಕಾರಿಯನ್ನು ಕಾಣುವ ಪ್ರಯತ್ನವನ್ನು ಜಿಲ್ಲೆಯ `ಹೆಗಡೆ ಅಭಿಮಾನಿಗಳು' ಮಾಡಿದರು. ಆದರೆ ಕುಮಟಾ ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ ಶಶಿಭೂಷಣ ಹೆಗಡೆ ಅವರಿಗೆ ಗೆಲುವು ಕಾಣದೇ ಹೋಗಿದ್ದರಿಂದ ಅವರ ಬಯಕೆ ಈಡೇರಲಿಲ್ಲ.

ಈ ಬಾರಿ ಮೂರನೆ ಪ್ರಯತ್ನಕ್ಕೆ ಕೈಹಾಕಿರುವ ರಾಮಕೃಷ್ಣ ಹೆಗಡೆ ಅಭಿಮಾನಿಗಳು, ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕಿನ ಜನತೆಯ ಮುಂದೆ `ಹೆಗಡೆ ವಂಶದ ಕುಡಿ'ಯನ್ನು ತಂದು ನಿಲ್ಲಿಸಿದ್ದಾರೆ. ರಾಮಕೃಷ್ಣ ಹೆಗಡೆ ಅವರ ಹೆಸರಿನ ಶ್ರೀರಕ್ಷೆಯೊಂದಿಗೆ, ಎಸ್. ಬಂಗಾರಪ್ಪ ಮತ್ತು ಕುಮಾರಸ್ವಾಮಿ ಅವರ ಹೆಸರಿನ ಬಲದೊಂದಿಗೆ ಚುನಾವಣಾ ಕಣಕ್ಕಿಳಿದಿರುವ ಶಶಿಭೂಷಣ ಹೆಗಡೆ ಅವರಿಗೆ,ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆ ಅವರ ನಡುವಿನ ವಿರಸದ ಸಂಬಂಧದ  ಹಳೆಯ ಇತಿಹಾಸವೂ ಕೊಂಚ ಕಿರಿಕಿರಿ ಉಂಟು ಮಾಡುತ್ತಿರುವುದು ಅಚ್ಚರಿಯ ಸಂಗತಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT