ADVERTISEMENT

ದೂರವಾದ ಸುನಾಮಿ ಭೀತಿ ಕಡಲತೀರದಲ್ಲಿ ಕಲರವ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 9:55 IST
Last Updated 14 ಏಪ್ರಿಲ್ 2012, 9:55 IST

ಕಾರವಾರ: ಸುನಾಮಿ ಭೀತಿಯಿಂದಾಗಿ ಕಳೆದೆರಡು ದಿನಗಳಿಂದ ಕರಾವಳಿಯಲ್ಲಿ ಸ್ಥಗಿತಗೊಂಡಿದ್ದ ಮೀನುಗಾರಿಕೆ ಚಟುವಟಿಕೆ ಶುಕ್ರವಾರ ಪುನಃ ಆರಂಭಗೊಂಡಿತು. ನಗರದ ಬೈತಖೋಲ ಬಂದರು ಪ್ರದೇಶದಲ್ಲಿ ಲಂಗರು ಹಾಕಿದ್ದ ಗೋವಾ, ಮಲ್ಪೆ ಮತ್ತು ಮಂಗಳೂರಿನ ಆಳ ಸಮುದ್ರ ಮೀನುಗಾರಿಕೆ ದೋಣಿಗಳು ಸಂಜೆಯ ಹೊತ್ತಿಗೆ ಮೀನುಗಾರಿಕೆ ಮರಳಿದವು.

ಬೈತಖೋಲ ಬಂದರು ಪ್ರದೇಶದಲ್ಲಿ ದಿನವಿಡಿ ಮೀನುಗಾರಿಕೆ ಚಟುವಟಿಕೆಗಳು ನಡೆದವು. ಮೀನಿನ ಲಭ್ಯತೆ ಕಡಿಮೆ ಇರುವುದರಿಂದ ಬಹುತೇಕ ಪರ್ಶಿನ್ ದೋಣಿಗಳು ದಡದಲ್ಲಿ ಲಂಗರು ಹಾಕಿದ್ದರೆ, ಟ್ರಾಲರ್ ದೋಣಿಗಳು ಮೀನುಗಾರಿಕೆ ಹೋಗಿ ಸಂಜೆಯ ಹೊತ್ತಿಗೆ ದಡಕ್ಕೆ ಆಗಮಿಸಿದವು.

`ಸುನಾಮಿ ಬರುತ್ತಿದೆ ಎನ್ನುವ ಬಗ್ಗೆ ಆತಂಕಗೊಂಡಿರಲಿಲ್ಲ. ಸಮುದ್ರದಲ್ಲಿ ಬದಲಾವಣೆ ಆದರೆ ಅದು ನಮಗೆ ಗೊತ್ತಾಗುತ್ತದೆ. ಇಂಡೊನೇಷ್ಯಾದಲ್ಲಿ ಆಗಿರುವ ಭೂಕಂಪದಿಂದಾಗಿ ಸುನಾಮಿ ಬರುವ ಸಾಧ್ಯತೆ  ಇದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರಿಂದ ಮೀನುಗಾರಿಕೆ ಸ್ಥಗಿತಗೊಳಿಸಿದ್ದೇವು~ ಎಂದು ಮೀನುಗಾರ ವಿಶ್ವನಾಥ `ಪ್ರಜಾವಾಣಿ~ಗೆ ತಿಳಿಸಿದರು.

ಕಡಲತೀರದಲ್ಲಿ ಕಲರವ: ಕಳೆದರಡು ದಿನಗಳಿಂದ ಬಿಕೋ ಎನ್ನುತ್ತಿದ್ದ ಇಲ್ಲಿಯ ರವೀಂದ್ರನಾಥ ಟ್ಯಾಗೋರ ಕಡಲತೀರಕ್ಕೆ ಶುಕ್ರವಾರ ಪ್ರವಾಸಿಗರ ಆಗಮನವಾಯಿತು. ಪ್ರವಾಸಿಗರು ಮತ್ತು ಸ್ಥಳೀಯರು ವಿಹಾರಕ್ಕೆಂದು ಕುಟುಂಬ ಸಮೇತ ಬಂದವರಿಂದ ಕಡಲತೀರಕ್ಕೆ ಹೊಸಕಳೆ ಬಂದಿತ್ತು.

ಕಡಲತೀರದಲ್ಲಿ ಬಂದ ಮಕ್ಕಳು, ಯುವಕರು ಮತ್ತು ಯುವತಿಯರು ನೀರಿನಲ್ಲಿ ಆಟವಾಡುತ್ತ ಆನಂದಪಟ್ಟರು. ಕಡಲತೀರಕ್ಕೆ ಬಂದ ಒಂಟೆ, ಟಾಂಗಾ ಗಾಡಿಗಳ ಮೇಲೆ ಕುಳಿತ ಮಕ್ಕಳು ತೀರದ ತುಂಬ ತಿರುಗಾಡಿ ಖುಷಿಪಟ್ಟರು. ಸುನಾಮಿಭೀತಿಯನ್ನು ದೂರ ಮಾಡಿ ಎಲ್ಲರೂ ತೀರಕ್ಕೆ ಬಂದು ಸೂರ್ಯಾಸ್ತ ಆಹ್ಲಾದಕರ ವಾತಾವರಣದ ಖುಷಿ ಅನುಭವಿಸಿದರು.

`ಸುನಾಮಿ ಬರುತ್ತದೆ ಎನ್ನುವ ಸುದ್ದಿ ಹರಡಿದ್ದರಿಂದ ಕಳೆದೆರಡು ದಿನಗಳಿಂದ ವ್ಯಾಪಾರವೇ ಇರಲಿಲ್ಲ. ರೂ. 20. 30 ವ್ಯಾಪಾರ ಮಾಡಿಕೊಂಡು ಮನೆಗೆ ಹಿಂತಿರುಗಿದ್ದೆ. ತೀರದಲ್ಲಿ ಈವತ್ತು ಪ್ರವಾಸಿಗರು ಬಂದಿದ್ದಾರೆ.

ಇಲ್ಲಿ ಪ್ರವಾಸಿಗರು ಬಂದರೆ ಮಾತ್ರ ನಮಗೆ ವ್ಯಾಪಾರ ಜೋರಾಗಿರುತ್ತದೆ~ ಎಂದು ಉತ್ತರ ಪ್ರದೇಶದ ಮಥುರಾದಿಂದ ಬಂದು ಇಲ್ಲಿ ಬಲೂನ್ ಮಾಡುತ್ತಿರುವ ಸುನೀಲ್ ಶರ್ಮಾ `ಪ್ರಜಾವಾಣಿ~ಗೆ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.