ADVERTISEMENT

ದೇಶದ ಕರಾವಳಿಯ 2ನೇ ಗಾಲ್ಫ್ ಕ್ಲಬ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 9:45 IST
Last Updated 25 ಏಪ್ರಿಲ್ 2012, 9:45 IST

ಭಟ್ಕಳ: ವಿಶ್ವವಿಖ್ಯಾತ ಪ್ರಸಿದ್ದ ಪ್ರವಾಸಿ ತಾಣ ಮುರ್ಡೇಶ್ವರದ ಪ್ರವಾಸೋದ್ಯಮದ ಕಿರೀಟಕ್ಕೆ ಡಾ.ಆರ್.ಎನ್.ಶೆಟ್ಟಿಯವರು ತಮ್ಮ ಬಹುದಿನಗಳ ಕನಸಾದ ದೇಶದ ಕರಾವಳಿಯ 2ನೇ ಗಾಲ್ಫ್ ಕ್ಲಬ್ ಎಂಬ ಮತ್ತೊಂದು ಗರಿಯನ್ನು ಸಿಕ್ಕಿಸಿ ಬುಧವಾರ ಲೋಕಾರ್ಪಣೆ ಮಾಡಲಿದ್ದಾರೆ.

ಮುರ್ಡೇಶ್ವರ ಸಮೀಪದ ಕಾಯ್ಕಿಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಸುಂದರ ಕಡಲತೀರದ ಸಮೀಪದ ಸುಮಾರು 50 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಿರುವ ಈ ಗಾಲ್ಫ್ ಮೈದಾನ ರಾಜ್ಯದ 2ನೇ ಅತೀ ದೊಡ್ಡ ಮೈದಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಮುರ್ಡೇಶ್ವರ ಸಮೀಪದ ಕಾಯ್ಕಿಣಿಯ ರಾ.ಹೆ.ಯಿಂದ ಒಂದು ಕಿ.ಮೀ. ದೂರದ ಕಡಲಂಚಿನಲ್ಲಿ ಸಾವಿರಾರು ತೆಂಗಿನ ಮರಗಳ ನಡುವೆ ಹಸಿರು ಹಾಸಿನಿಂದ ನಿರ್ಮಿಸಿರುವ ಈ ಗಾಲ್ಫ್ ಮೈದಾನದಲ್ಲಿ ಗಾಲ್ಫ್ ಆಟಕ್ಕಾಗಿ ಒಂಬತ್ತು ಕುಳಿಗಳನ್ನು ನಿರ್ಮಿಸಲಾಗಿದೆ. ಅದರಂತೆ ವಾಯುವಿಹಾರಕ್ಕಾಗಿ ರಸ್ತೆ, ಪೂಜೆಗಾಗಿ ಮಂದಿರ, ವಸತಿಗಾಗಿ ಸುಸಜ್ಜಿತ 24 ಕೊಠಡಿಯನ್ನು ಹೊಂದಿರುವ ರೆಸಾರ್ಟ್, ಪ್ರಕೃತಿ ಚಿಕಿತ್ಸೆಯ ವ್ಯವಸ್ಥೆ, ವ್ಯಾಯಾಮ ಉಪಕರಣಗಳು, ದೊಡ್ಡವರು ಮತ್ತು ಮಕ್ಕಳಿಗಾಗಿ ಈಜುಕೊಳ ಸೇರಿದಂತೆ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಶೆಟ್ಟರ ಕಲ್ಪನೆ, ಕನಸು: ಡಾ.ಆರ್.ಎನ್.ಶೆಟ್ಟಿಯವರು ಕಾಯ್ಕಿಣಿಯಲ್ಲಿ ಗಾಲ್ಫ್ ರೆಸಾರ್ಟ್ ನಿರ್ಮಾಣ ಮಾಡುವಲ್ಲೂ ಒಂದು ಹಿನ್ನೆಲೆ ಇದೆ. ಮುರ್ಡೇಶ್ವರದ ಸುಂದರ ಕಡಲ ತೀರಕ್ಕೆ ಹೊಂದಿಕೊಂಡಂತಿರುವ ಕಾಯ್ಕಿಣಿಯ ಕಡಲ ತೀರದ ಸಮೀಪವಿರುವ 14 ಎಕರೆ ಜಾಗದಲ್ಲಿ ಸುಂದರವಾದ ತೆಂಗಿನತೋಟವನ್ನು ಮಾಡಬೇಕೆಂದುಕೊಂಡಿದ್ದರು.

ಆದರೆ ಇಲ್ಲಿನ ಸುಂದರ ಕಡಲ ತೀರವನ್ನು ನೋಡಿದ ಅವರು, ಮುರ್ಡೆಶ್ವರವನ್ನು ಪ್ರವಾಸಿಗರು ಆಕರ್ಷಿಸುವಂತೆ ಮಾಡಿದರು. ಮುಂದೊಂದು ದಿನ ಇಲ್ಲೊಂದು ಗಾಲ್ಫ್ ಮೈದಾನ ನಿರ್ಮಿಸಿದರೆ ಹೇಗೆ ಎಂದು ಯೋಚನೆ ಬಂತು. ಹತ್ತು ವರ್ಷಗಳ ಹಿಂದೆ ಕಂಡ ಕನಸನ್ನು ಶೆಟ್ಟರು ಇಂದು ನನಸು ಮಾಡಿಕೊಂಡಿದ್ದಾರೆ. ಗಾಲ್ಫ್ ಮೈದಾನ ನಿರ್ಮಾಣದ ಸಂದರ್ಭದಲ್ಲಿ ಹಲವು ವಾದ, ವಿವಾದಗಳು ತಲೆದೋರಿದರೂ ಸಹ ಅದಕ್ಕೆ ಹಿಂಜರಿಯದೇ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು  ಅದನ್ನು ಸಾಕಾರಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.