ADVERTISEMENT

‘ಧರ್ಮಕ್ಕಾಗಿ ಅಧಿಕಾರ ದುರ್ಬಳಕೆ’

ಸಭೆಯಲ್ಲಿ ಆರ್.ವಿ. ದೇಶಪಾಂಡೆ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2018, 10:14 IST
Last Updated 4 ಮೇ 2018, 10:14 IST

ಹೊನ್ನಾವರ: ‘ಕಾಂಗ್ರೆಸ್‌ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡಿದರೆ, ಧರ್ಮ ಪ್ರಚಾರಕ್ಕೆ ಬಿಜೆಪಿ ಮುಖಂಡರು ಕೆಲಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಆರೋಪಿಸಿದರು.

ಇಲ್ಲಿ ಕುಮಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಶೆಟ್ಟಿ ಅವರ ಪರವಾಗಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ  ಮಾತನಾಡಿದರು.

’ರಾಮನಿಗೆ ಗುಡಿ ಕಟ್ಟಿಸುವುದಾಗಿ ಹೇಳಿ ಒಂದು ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಯುವಕನ ಸಾವನ್ನೇ ಪ್ರಚೋದಿಸಿ  ಗಲಭೆ ಸೃಷ್ಟಿಸಿತ್ತು’ ಎಂದು ದೂರಿದರು.

ADVERTISEMENT

’ನಾಲಿಗೆಯ ಮೇಲೆ ಹತೋಟಿ ಇಲ್ಲದ ಸಂಸದರು ಸಂವಿಧಾನ ಬದಲಿಸುತ್ತೇನೆ ಎನ್ನುವ ಹೇಳಿಕೆ ನೀಡಿ ಸಂಸತ್ತಿ
ನಲ್ಲಿ ಕ್ಷಮೆ ಕೇಳಬೇಕಾಯಿತು. ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ಪಾಪದ ಕೆಲಸ’ ಎಂದರು.

‘ಶಕ್ತಿಯಿಲ್ಲದ ಜೆಡಿಎಸ್ ಪಕ್ಷಕ್ಕೆ ಮತ ನೀಡುವುದರಿಂದ ಪರೋಕ್ಷವಾಗಿ ಅದು ಬಿಜೆಪಿಗೆ ಅನುಕೂಲವಾಗಲಿದೆ. ಮಹಿಳೆಯಾದರೂ ಶಾರದಾ ಶೆಟ್ಟಿ ಅನೇಕ ಅಭಿವೃದ್ಧಿ ಕೆಲಸ  ಕ್ಷೇತ್ರದಲ್ಲಿ ಮಾಡಿದ್ದಾರೆ’ ಎಂದು ಪ್ರಶಂಸಿಸಿದರು.

‘ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರದ ಬಗ್ಗೆ ಅದರ ಮಿತ್ರ ಪಕ್ಷಗಳೇ ಭ್ರಮನಿರಸನಗೊಂಡಿದ್ದು ಮಿತ್ರರು ಶತ್ರುಗಳಾಗುತ್ತಿದ್ದಾರೆ. ಉತ್ತರ ಪ್ರದೇಶದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಗಿದೆ’ ಎಂದರು.

’ಕಚ್ಚಾ ತೈಲದ ಬೆಲೆ ಕಡಿಮೆಯಾದರೂ ಇಂಧನ ಬೆಲೆ ಏರುತ್ತಿದೆ. ನೋಟು ರದ್ದತಿಯಿಂದ ಆರ್ಥಿಕ ವ್ಯವಸ್ಥೆಯೇ ಹಾಳಾಗಿದೆ’ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಮಾಜಿ ಸಚಿವ ಆರ್.ಎನ್. ನಾಯ್ಕ ಮಾತನಾಡಿ, ‘ಸಚಿವ ಅನಂತಕುಮಾರ ಹೆಗಡೆ ಅವರ ಮೂಲಕ ಬಿಜೆಪಿ ಪಕ್ಷ ಸಂವಿಧಾನ ಬದಲಾಯಿಸುವ ವಿಷಯ ಪ್ರಸ್ತಾಪಿಸಿದೆ. ಸಂವಿಧಾನ ಬದಲಿಸುವುದರಿಂದ ಹಿಂದುಳಿದ ವರ್ಗದ ಜನರು ಮತ್ತೆ ಹಿಂದಿನ ಸ್ಥಿತಿಗೆ ಮರಳುವ ಅಪಾಯ ಇದೆ. ಸಂವಿಧಾನ ಉಳಿಸಲು ರಾಹುಲ್ ಗಾಂಧಿಗೆ ಶಕ್ತಿ ತುಂಬಬೇಕಿದೆ’ ಎಂದರು. ಜಗದೀಪ ತೆಂಗೇರಿ ಸ್ವಾಗತಿಸಿದರು. ಶಾಸಕಿ ಶಾರದಾ ಶೆಟ್ಟಿ, ಮುಖಂಡರಾದ ತಾರಾ ಗೌಡ, ಎಂ.ಎನ್. ಸುಬ್ರಹ್ಮಣ್ಯ, ರಾಜಶ್ರೀ ನಾಯ್ಕ, ವಿನೋದ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.