ADVERTISEMENT

ಧಾರಣಾ ಸಾಮರ್ಥ್ಯ: ಜುಲೈ ಅಂತ್ಯಕ್ಕೆ ವರದಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 10:56 IST
Last Updated 9 ಜುಲೈ 2013, 10:56 IST

ಕಾರವಾರ: `ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಕುರಿತ ತಾತ್ಕಾಲಿಕ ಅಧ್ಯಯನ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದು, ಪೂರ್ಣ ವರದಿಯನ್ನು ಜುಲೈ ತಿಂಗಳ ಅಂತ್ಯಕ್ಕೆ ಸರ್ಕಾರಕ್ಕೆ ಸಲ್ಲಿಸಲಾಗುವುದು' ಎಂದು ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಸುಭಾಷ್ ಚಂದ್ರನ್ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಈ ಅಧ್ಯಯನಕ್ಕೆ ರಾಜ್ಯ ಜೀವವೈವಿಧ್ಯ ಮಂಡಳಿ ಅನುದಾನ ನೀಡಿದ್ದು, ಡಾ.ಟಿ.ವಿ. ರಾಮಚಂದ್ರ, ಡಾ.ಸುಭಾಸ್ ಚಂದ್ರನ್ ಮತ್ತು ಎನ್.ವಿ.ಜೋಶಿ ನೇತೃತ್ವದಲ್ಲಿ ತಂಡ ಅಧ್ಯಯನ ನಡೆಸಿದೆ. ಅರಣ್ಯಗಳ ಪಾರಿಸಾರಿಕ ಸೇವೆ, ಬೃಹತ್ ಯೋಜನೆಗಳಿಂದ ಆಗಿರುವ ಅರಣ್ಯ ನಾಶ, ಪಶು ಸಂಗೋಪನೆ, ಕೃಷಿ, ಮೀನುಗಾರಿಕೆ, ಅರಣ್ಯ ಉತ್ಪನ್ನ ಮುಂತಾದ ವಿಷಯಗಳ ಪ್ರಚಲಿತ ಪರಿಸ್ಥಿತಿಯನ್ನು ವಿಶ್ಲೇಷಣೆ ಮಾಡಲಾಗಿದೆ. ಸಾಂಪ್ರದಾಯಿಕ ಪದ್ಧತಿಗಳು, ಸುಸ್ಥಿರ ಅಭಿವೃದ್ಧಿಯ ಅವಕಾಶಗಳು ಕುರಿತು ಕೂಡ ವಿಶ್ಲೇಷಣೆ ಮಾಡಲಾಗಿದೆ' ಎಂದರು.

`ಜಾನುವಾರು ಸಾಕಣೆ ದೊಡ್ಡ ಬಿಕ್ಕಟ್ಟಾಗಿದ್ದು, ಹೊನ್ನಾವರ ತಾಲ್ಲೂಕಿನಲ್ಲಿ ಒಂದು ಹೆಕ್ಟೇರ್ ಕೃಷಿ ಭೂಮಿಗೆ 5 ದನಗಳು ಮಾತ್ರ ಇದೆ. ಕಾರವಾರ, ಶಿರಸಿ, ಸಿದ್ದಾಪುರದಲ್ಲಿ 2-3 ಇದೆ. ಶಿರಸಿ, ಸಿದ್ದಾಪುರದಲ್ಲಿ ಬೆಟ್ಟ, ಗುಡ್ಡಗಳಿದ್ದು ಮೇವು ಹೆಚ್ಚು ಸಿಗುತ್ತದೆ. ಆದರೆ, ಕರಾವಳಿಯಲ್ಲಿ ಮೇವು ಕಡಿಮೆ ಇದೆ. ಆದ್ದರಿಂದ ಕರಾವಳಿಯಲ್ಲಿ ಕೃಷಿ ಮಾಡಲು ಸಾವಯವ ಫಾರ್ಮ್ ಇರಲೇಬೇಕು. ಪ್ರತಿ ಗ್ರಾಮ ಪಂಚಾಯ್ತಿ ದನಗಳ ಮೇವಿಗಾಗಿ ಫಾರ್ಮ್ ಮಾಡಬೇಕು' ಎಂದರು.

ಹೋಮ್‌ಸ್ಟೇಗಳಿಗೆ ಲೈಸನ್ಸ್ ನೀಡಲಿ: `ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿದ್ದು, ಹೋಮ್ ಸ್ಟೇಗಳಿಗೆ ಅವಕಾಶ ನೀಡಬೇಕಿದೆ. ಇದರಿಂದ ಸಾವಿರಾರು ಜನರಿಗೆ ನೌಕರಿ ಸಿಗುತ್ತದೆ. ಹೋಮ್‌ಸ್ಟೇಗಳಿಗೆ ಸರ್ಕಾರ ಪರವಾನಗಿ ಕೊಡಬೇಕು' ಎಂದರು.

`ಉತ್ತರ ಕನ್ನಡ ಜಿಲ್ಲೆ ಅನನ್ಯ ಜೀವ ವೈವಿಧ್ಯ ಹೊಂದಿದ್ದು, ಇಲ್ಲಿ ಬೃಹತ್ ಯೋಜನೆಗಳಿಗೆ ಅವಕಾಶ ಸಲ್ಲದು. ಅನಿಯಂತ್ರಿತ ಕ್ವಾರಿ ಮತ್ತು ಅಕ್ರಮ ಮರಳು ಗಣಿಗಾರಿಕೆಗೆ ತಡೆ ಹಾಕಬೇಕು. ಕೃಷಿ, ತೋಟಗಾರಿಕೆಯಲ್ಲಿ ರಾಸಾಯನಿಕ ಔಷಧಿ ಸಿಂಪಡಣೆಯನ್ನು ಹಂತ ಹಂತವಾಗಿ ನಿಲ್ಲಿಸಬೇಕು. ಔಷಧಿ ಮೂಲಿಕೆಗಳ ಸಂಗ್ರಹವನ್ನು ನಿಯಂತ್ರಣಕ್ಕೆ ಒಳಪಡಿಸಬೇಕು. ಬೃಹತ್ ಯೋಜನೆಗಳಿಂದ ಈಗಾಗಲೇ ನಾಶವಾಗಿರುವ ಅರಣ್ಯ ಪ್ರದೇಶಗಳ ಪುನರುಜ್ಜೀವನಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಬೇಕು. ಗ್ರಾಮ ಅರಣ್ಯ ಸಮಿತಿಗಳ ಅರಣ್ಯ ಉತ್ಪನ್ನ ಸಂಗ್ರಹ ನಡೆಯಬೇಕು ಎನ್ನುವುದು ಅಧ್ಯಯನ ಶಿಫಾರಸುಗಳ ಕೆಲ ಪ್ರಮುಖ ಅಂಶಗಳಾಗಿವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.