ADVERTISEMENT

ನಡುಗಡ್ಡೆಗೆ ಎರಡು ದೋಣಿ ವ್ಯವಸ್ಥೆ

ದೇವಕಾರ, ಐಗಳ ಕುರ್ವೆಗೆ ಇವಿಎಂ, ಮತಗಟ್ಟೆ ಅಧಿಕಾರಿಗಳ ಸಾಗಣೆಗೆ ಬಳಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 11:31 IST
Last Updated 6 ಮೇ 2018, 11:31 IST
ನಡುಗಡ್ಡೆಗೆ ಎರಡು ದೋಣಿ ವ್ಯವಸ್ಥೆ
ನಡುಗಡ್ಡೆಗೆ ಎರಡು ದೋಣಿ ವ್ಯವಸ್ಥೆ   

ಕಾರವಾರ:  ‘ನಡುಗಡ್ಡೆಗಳಾಗಿರುವ ಕಾರವಾರ ತಾಲ್ಲೂಕಿನ ದೇವಕಾರ ಮತ್ತು ಕುಮಟಾ ತಾಲ್ಲೂಕಿನ ಐಗಳ ಕುರ್ವೆ ಮತಗಟ್ಟೆಗಳಿಗೆ ವಿದ್ಯುನ್ಮಾನ ಮತಯಂತ್ರಗಳು, ಮತಗಟ್ಟೆ ಅಧಿಕಾರಿಗಳ ಸಾಗಣೆಗೆ ಎರಡು ದೋಣಿಗಳನ್ನು ಬಾಡಿಗೆಗೆ ಪಡೆಯಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿದ್ಯುನ್ಮಾನ ಮತಯಂತ್ರಗಳು ಮತ್ತು ಮತಗಟ್ಟೆ ಅಧಿಕಾರಿಗಳ ಸಾಗಣೆಗೆ ಒಟ್ಟು 175 ಬಸ್‌ಗಳು ಹಾಗೂ 132 ಮ್ಯಾಕ್ಸಿಕ್ಯಾಬ್‌ಗಳನ್ನು ಬಳಕೆ ಮಾಡಲಾಗುತ್ತದೆ. ಮಾದರಿ ನೀತಿ ಸಂಹಿತೆ ಅನುಷ್ಠಾನ ಮತ್ತು ಚುನಾವಣಾ ವೆಚ್ಚ ಉಸ್ತುವಾರಿ ತಂಡಗಳ ಸಂಚಾರಕ್ಕೆ 176 ಜೀಪುಗಳನ್ನು ಬಳಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಚುನಾವಣೆಗೆ ಸಂಬಂಧಿಸಿದ ಮಾಹಿತಿ ಮತ್ತು ಮತದಾನಕ್ಕೆ ಆಹ್ವಾನ ಪತ್ರವನ್ನು ಜಿಲ್ಲೆಯ ಅಂಧ ಮತದಾರರಿಗೆ ಬ್ರೈಲ್ ಲಿಪಿಯ ಮೂಲಕ ನೀಡಲಾಗುತ್ತಿದೆ. ಅಂಗವಿಕಲ ಮತದಾರರ ಅನುಕೂಲಕ್ಕಾಗಿ ಮತಗಟ್ಟೆಗಳಲ್ಲಿ 576 ಗಾಲಿ ಕುರ್ಚಿಗಳನ್ನು ಇಡಲಾಗುತ್ತದೆ. ಇಡೀ ರಾಜ್ಯದಲ್ಲಿ ಇಂತಹ ವ್ಯವಸ್ಥೆ ಮಾಡುತ್ತಿರುವ ಏಕೈಕ ಜಿಲ್ಲೆ ನಮ್ಮದಾಗಿದೆ’ ಎಂದು ಹೇಳಿದರು.

ADVERTISEMENT

‘ಅಂಗವಿಕಲ ಮತದಾರರ ಅನುಕೂಲಕ್ಕಾಗಿ ಮತಗಟ್ಟೆಗಳಲ್ಲಿ ರ‍್ಯಾಂಪ್ ವ್ಯವಸ್ಥೆಯನ್ನೂ ಮಾಡಲಾಗುವುದು. ಮಾದರಿ ಮತಗಟ್ಟೆಗಳಿಗೆ ಅಂಗವಿಕಲ ಅಧಿಕಾರಿಗಳನ್ನು ನೇಮಕ ಮಾಡಲು ಪ್ರಾಶಸ್ತ್ಯ ನೀಡಲಾಗುವುದು’ ಎಂದು ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಶೇ 20ರಷ್ಟು ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್‌ಗಳು ಹಾಗೂ ಶೇ 30ರಷ್ಟು ವಿವಿ ಪ್ಯಾಟ್‌ಗಳನ್ನು ಹೆಚ್ಚುವರಿಯಾಗಿ ಪೂರೈಕೆ ಮಾಡಲಾಗಿದೆ. ಈ ಕಾರ್ಯ ಈಗಾಗಲೇ ಕಾರವಾರ, ಹಳಿಯಾಳ ಮತ್ತು ಕುಮಟಾದಲ್ಲಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ಈ ಚುನಾವಣೆಯಲ್ಲಿ ವಿವಿ ಪ್ಯಾಟ್‌ಗಳನ್ನು ಬಳಸುತ್ತಿರುವ ಕಾರಣ ಒಬ್ಬ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತಿದೆ. ಅದರಂತೆ ಪ್ರತಿ ಮತಗಟ್ಟೆಗೆ ತಲಾ ಐವರು ಸಿಬ್ಬಂದಿಯ ಅವಶ್ಯಕತೆಯಿದೆ. ಈ ಸಂಬಂಧ ಶೇ 30ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇವರಲ್ಲಿ 240 ಮೈಕ್ರೊ ಆಬ್ಸರ್ವರ್‌ಗಳೂ ಸೇರಿದ್ದಾರೆ ಎಂದು ತಿಳಿಸಿದರು.

ದೂರುಗಳು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಿಸಲಾಗಿರುವ ದೂರು ಉಸ್ತುವಾರಿ ಕೋಶಕ್ಕೆ ಈವರೆಗೆ 245 ದೂರುಗಳು ಬಂದಿದ್ದು, ಕೇವಲ ನಾಲ್ಕು ವಿಲೇವಾರಿಗೆ ಬಾಕಿಯಿವೆ. ರಾಜಕೀಯ ಸಭೆ, ಸಮಾರಂಭಗಳನ್ನು ಆಯೋಜಿಸಲು ಅನುಮತಿ ಕೋರಿ 576 ಮನವಿಗಳು ಬಂದಿವೆ. ಅವುಗಳ ಪೈಕಿ ಎರಡು ಮಾತ್ರ ಬಾಕಿಯಿವೆ ಎಂದು ತಿಳಿಸಿದರು.

ಭದ್ರತೆ: ಜಿಲ್ಲೆಗೆ ಕೇಂದ್ರ ಅರೆ ಸೈನಿಕ ಪಡೆಗಳ 18 ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಒಟ್ಟು 41 ಹೆಚ್ಚು ಮಹತ್ವದ ಹಾಗೂ 33 ಮತ್ತಷ್ಟು ಗಮನ ಅಗತ್ಯವಿರುವ ಮತಗಟ್ಟೆಗಳಿವೆ. 282 ಮತಗಟ್ಟೆಗಳಿಗೆ ಅರೆ ಸೈನಿಕರ ನಿಯೋಜನೆ ಮಾಡಲು ಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮತ ಎಣಿಕೆಗೆ ವ್ಯವಸ್ಥೆ: ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಸಿಬ್ಬಂದಿಗೆ ಮೇ 14ರಂದು ತರಬೇತಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಮಾತನಾಡಿ, ‘ಜಿಲ್ಲೆಯಲ್ಲಿ 12 ಸಖಿ ಮತಗಟ್ಟೆಗಳು, ಆರು ಅಂಗವಿಕಲ ಸ್ನೇಹಿ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಂಧ ಮತದಾರರ ನೆರವಿಗಾಗಿ 1,500 ಕರಪತ್ರಗಳನ್ನು ಬ್ರೈಲ್ ಲಿಪಿಯಲ್ಲಿ ಮುದ್ರಿಸಲಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಎಲ್.ಎ.ಮಂಜುನಾಥ ಅವರೂ ಇದ್ದರು.

ಇಬ್ಬರು ರನ್ನರ್‌ಗಳು

92 ಮತದಾನ ಕೇಂದ್ರಗಳು ದೂರವಾಣಿ ಅಥವಾ ಮೊಬೈಲ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿವೆ. ಇವುಗಳ ಪೈಕಿ ಸಾಧ್ಯವಿದ್ದಲ್ಲಿಗೆ ನಿಸ್ತಂತು ಸಂಪರ್ಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಉಳಿದೆಡೆಗೆ ತಲಾ ಇಬ್ಬರು ರನ್ನರ್‌ಗಳನ್ನು ನಿಯೋಜಿಸಲಾಗುವುದು. ಈ ಪೈಕಿ ಒಬ್ಬ ಮತದಾನ ಕೇಂದ್ರದ ಆವರಣದಲ್ಲಿ ಮತ್ತೊಬ್ಬ ದೂರವಾಣಿ ಸಂಪರ್ಕ ಇರುವ ಸ್ಥಳದಲ್ಲಿ ಇರಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಪರ್ಯಾಯ ದಾಖಲೆಗಳು

ಮತದಾನಕ್ಕೆ ಗುರುತಿನ ಚೀಟಿಯ ಬದಲು ಇತರ 12 ದಾಖಲೆಗಳನ್ನೂ ಪರ್ಯಾಯವಾಗಿ ನೀಡಿ ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.

ಅವುಗಳಲ್ಲಿ ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಫೋಟೊ ಇರುವ ಬ್ಯಾಂಕ್ ಪಾಸ್‌ಬುಕ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ನರೇಗಾ ಉದ್ಯೋಗ ಚೀಟಿ ಪ್ರಮುಖವಾದವುಗಳಾಗಿವೆ.

**
ಸೇವಾ ಮತದಾರರಿಗೆ ಇದೇ ಮೊದಲ ಬಾರಿಗೆ ಆನ್‌ಲೈನ್ ವ್ಯವಸ್ಥೆ ಮಾಡಲಾಗಿದ್ದು, ತಮ್ಮ ಮೇಲಧಿಕಾರಿಗಳಿಂದ ಎಲೆಕ್ಟ್ರಾನಿಕ್ ಪೋಸ್ಟಲ್ ಮತಪತ್ರ ಪಡೆದು ಮತ ಚಲಾಯಿಸಬಹುದು 
– ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.